ಉಡುಪಿ: ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಆಯೋಜಿಸಿರುವ 14ನೇ ವರ್ಷದ ನಾಟಕೋತ್ಸವ ‘ರಂಗಹಬ್ಬ–14’ ಫೆಬ್ರವರಿ 22ರಿಂದ 28ರವರೆಗೆ ಉಡುಪಿಯ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ.
ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಹಾಗೂ ಗೌರವಾಧ್ಯಕ್ಷ ಎಂ.ಎಸ್. ಭಟ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2002ರಲ್ಲಿ ಸ್ಥಾಪಿತವಾದ ಸಂಘಟನೆ ಪ್ರತಿ ವರ್ಷ ಮೂರು ನಾಟಕಗಳನ್ನು ಸಿದ್ಧಪಡಿಸಿ ಇದುವರೆಗೆ 750ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ ಎಂದು ತಿಳಿಸಿದರು. ಯಕ್ಷಗಾನ ಸಾಹಿತ್ಯ, ಜನಪರ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರ ಚಟುವಟಿಕೆ ನಡೆಸುತ್ತಿದ್ದು, 23 ಬಾರಿ ರಾಜ್ಯಮಟ್ಟದ ಹಾಗೂ 4 ಬಾರಿ ರಾಷ್ಟ್ರೀಯ ನಾಟಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದೆ. ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ ಎಂದು ವಿವರಿಸಿದರು.
ಈ ಬಾರಿ ನಾಟಕೋತ್ಸವವು ಪ್ರತಿದಿನ ಸಂಜೆ 6.30ಕ್ಕೆ ಆರಂಭವಾಗಲಿದೆ. ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ನಗರಸಭೆ ಹಾಗೂ ಸಂಸ್ಕೃತಿ ನಿರ್ದೇಶನಾಲಯ ಸಹಯೋಗ ನೀಡಿವೆ. ತುಳು ರಂಗಭೂಮಿ ಹಾಗೂ ತುಳು ಚಲನಚಿತ್ರರಂಗದ ಹಿರಿಯ ರಂಗಕರ್ಮಿ ಡಾ. ಪಿ. ಸಂಜೀವ ದಂಡೆಕೇರಿ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯಶ್‌ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರತಿದಿನ ರಂಗಸಾಧಕರಿಗೆ ಸನ್ಮಾನ ಹಾಗೂ ಅದೃಷ್ಟಶಾಲಿ ಪ್ರೇಕ್ಷಕರಿಗೆ ಟ್ರಾವೆಲಿಂಗ್ ಬ್ಯಾಗ್ ವಿತರಣೆ ನಡೆಯಲಿದೆ. ಯಕ್ಷಗುರು ಯು.ದುಗ್ಗಪ್ಪ ಅವರ ಸ್ಮರಣಾರ್ಥ ‘ಯಕ್ಷಸುಮ’ ಪ್ರಶಸ್ತಿಯನ್ನು ಯಕ್ಷಗಾನ ಗುರು ಬಿ. ಕೃಷ್ಣ ಸ್ವಾಮಿ ಜೋಷಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಹಾಗೂ ದಿವಾಕರ್ ಕಟೀಲ್ ಉಪಸ್ಥಿತರಿದ್ದರು.

