ಮಂಗಳೂರು : ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನದ ಬದಲಿಗೆ ಕನಿಷ್ಠ ವೇತನ ನೀಡಬೇಕು, 2011ರಿಂದ ನಿವೃತ್ತರಾದವರಿಗೂ ಗ್ರಾಚ್ಯುಟಿ ಹಾಗೂ ಇಎಸ್‌ಐ ಸೌಲಭ್ಯ ಕಲ್ಪಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ತಾರಾ ಬಲ್ಲಾಳ್ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 50 ವರ್ಷಗಳಿಂದ ಅಂಗನವಾಡಿ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕಾರ್ಯಕರ್ತೆಯರಿಗೆ ₹12,000 ಹಾಗೂ ಸಹಾಯಕಿಯರಿಗೆ ₹6,000 ಮಾತ್ರ ಗೌರವಧನ ನೀಡಲಾಗುತ್ತಿದೆ. ಶಾಲಾಪೂರ್ವ ಶಿಕ್ಷಣ, ಪೌಷ್ಟಿಕ ಆಹಾರ, ಮನೆ ಭೇಟಿ, ಆರೋಗ್ಯ ಮತ್ತು ಲಸಿಕಾ ಕಾರ್ಯಕ್ರಮ ಸೇರಿದಂತೆ ಹಲವು ಜವಾಬ್ದಾರಿಗಳ ಜೊತೆಗೆ ಬಿಎಲ್‌ಒ, ಜನಗಣತಿ ಮತ್ತಿತರ ಇಲಾಖೇತರ ಕೆಲಸಗಳಿಗೂ ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು.
ಗೌರವಧನವನ್ನು ಪ್ರತಿ ತಿಂಗಳ 5ರೊಳಗೆ ಪಾವತಿಸಬೇಕು. ಕಾರ್ಯಕರ್ತೆಯರಿಗೆ ₹15,000 ಹಾಗೂ ಸಹಾಯಕಿಯರಿಗೆ ₹10,000 ಗೌರವಧನ ನೀಡಬೇಕು. ಮೊಟ್ಟೆ ಖರೀದಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ 5ಜಿ ಮೊಬೈಲ್, ಗುಣಮಟ್ಟದ ಸಮವಸ್ತ್ರ ಹಾಗೂ ಕೇಂದ್ರಗಳ ಸ್ವಚ್ಛತೆಗೆ ಸಾದಿಲ್ವಾರು ಹಣ ಒದಗಿಸಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಇಲಾಖೇತರ ಕೆಲಸಗಳಿಗೆ ಹಾಗೂ ಸರ್ಕಾರಿ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವ ಕಾರ್ಯಕ್ಕೆ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಸಭೆಗಳ ಊಟದ ವೆಚ್ಚಕ್ಕೆ ನೀಡುತ್ತಿರುವ ₹30 ಅನ್ನು ಕನಿಷ್ಠ ₹250ಕ್ಕೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘದ ಕಾರ್ಯದರ್ಶಿ ಆಶಾಲತಾ, ಖಜಾಂಚಿ ರೇಣುಕಾ, ರಾಜ್ಯ ಸಂಘದ ಕೋಶಾಧಿಕಾರಿ ವಿಶಾಲಾಕ್ಷಿ, ಜಿಲ್ಲಾ ಉಪಾಧ್ಯಕ್ಷೆ ಗುಲಾಬಿ, ನಗರ ಸಂಘದ ಶೀಲಾವತಿ ಹಾಗೂ ಬಂಟ್ವಾಳ ತಾಲೂಕು ಅಧ್ಯಕ್ಷೆ ವಿಜಯವಾಣಿ ಉಪಸ್ಥಿತರಿದ್ದರು.

