ನಾಗಾಲ್ಯಾಂಡ್: ನಾಗಾಲ್ಯಾಂಡ್​ನ ಎರಡು ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಲ್ಲಿ ನಕಲಿ ಅಥವಾ ಕಳಪೆ ಗುಣಮಟ್ಟದ ಕಲಬೆರಕೆ ಮದ್ಯ ಸೇವಿಸಿ 19 ಮಂದಿ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ರಾಜ್ಯದಲ್ಲಿ 1990ರಿಂದಲೂ ಮದ್ಯಪಾನ ನಿಷೇಧ ಜಾರಿಯಲ್ಲಿದ್ದು, ಈ ಘಟನೆ ಬೆನ್ನಲ್ಲೇ ಶಂಕಿತ ಕಲಬೆರಕೆ ಮದ್ಯದ ಪೂರೈಕೆ ಜಾಲವನ್ನು ಪತ್ತೆಹಚ್ಚಲು ಪೊಲೀಸರು ತಂಡ ಕಾರ್ಯ ಪ್ರವೃತ್ತವಾಗಿದೆ.

ಅಕ್ರಮ ಕಲಬೆರಕೆ ಮದ್ಯ ಸೇವನೆಯಿಂದಾಗಿ ಕಳೆದ ಎರಡು ದಿನಗಳಲ್ಲಿ ಮೊಕೊಕ್‌ಚುಂಗ್ ಜಿಲ್ಲೆಯಲ್ಲಿ ಎಂಟು ಮತ್ತು ಟುಯೆನ್‌ಸಾಂಗ್ ಜಿಲ್ಲೆಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲಬೆರಕೆ ಮದ್ಯದಿಂದ ಸಂಭವಿಸಿದ ಸಾವುಗಳ ಕುರಿತು ತನಿಖೆ ನಡೆಸಲು ಹಾಗೂ ಆ ಮದ್ಯದ ಮೂಲ ಮತ್ತು ಪೂರೈಕೆ ಜಾಲವನ್ನು ಪತ್ತೆಹಚ್ಚಲು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಐ. ಬಂಗ್ಲಾಂಗ್ ಚಾಂಗ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವೆಸುಪ್ರಾ ಕೆಜೊ ತಿಳಿಸಿದ್ದಾರೆ.

ಕಲಬೆರಕೆ ಮದ್ಯ ಸೇವನೆಯಿಂದ ಈ ಸಾವುಗಳು ಸಂಭವಿಸಿವೆಯಾ ಎಂಬ ಕಾರಣವನ್ನು ಖಚಿತಪಡಿಸಿಕೊಳ್ಳಲು ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಗುವಾಹಟಿಗೆ ಕಳಿಸಲಾಗಿದೆ. ವೈದ್ಯಕೀಯ ಹಾಗೂ ಇತರೆ ಪೂರಕ ಸಾಕ್ಷ್ಯಗಳ ಆಧಾರದ ಮೇಲೆ ಅದನ್ನು ನಿರ್ಧರಿಸಲಾಗುವುದು ಎಂದಿದ್ದಾರೆ.

ಘಟನೆಯ ಸಾವುಗಳು ಮತ್ತು ಅನಾರೋಗ್ಯಕ್ಕೆ ನಿಖರವಾದ ಕಾರಣವೇನೆಂಬುದು ಇನ್ನೂ ತನಿಖೆಯ ಹಂತದಲ್ಲಿದೆ. ನಮಗೆ ಸಿಕ್ಕ ಕೆಲವು ಸುಳಿವು ಅನುಸಾರ ತನಿಖೆಗೆ ಮುಂದಾಗಿದ್ದು, ಈ ಕುರಿತು ಈಗಲೇ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಘಟನೆ ಬಳಿಕ ಹಲವು ಕಡೆ ಪೊಲೀಸರು ದಾಳಿ ನಡೆಸಿದ್ದು, 19 ಮಂದಿಯನ್ನು ಬಂಧಿಸಿದ್ದಾರೆ. ಈ ದಾಳಿ ಸಂದರ್ಭದಲ್ಲಿ ಸುಮಾರು 3,000 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.

ಗುರುತಿಸಲಾಗದ, ಲೇಬಲ್ ಇಲ್ಲದ ಅಥವಾ ಅಕ್ರಮವೆಂದು ಶಂಕಿಸಲಾದ ಮದ್ಯವನ್ನು ಸೇವಿಸದಂತೆ ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಅಲ್ಲದೆ, ಮದ್ಯ ಸೇವನೆಯ ನಂತರ ತಲೆಸುತ್ತುವಿಕೆ, ದೃಷ್ಟಿ ಮಂಜಾಗುವಿಕೆ, ಉಸಿರಾಟದ ತೊಂದರೆ ಅಥವಾ ಪ್ರಜ್ಞೆ ತಪ್ಪುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಕೋರಿದ್ದಾರೆ. ಶಂಕಿತ ಮೂಲದಿಂದ ಬಂದ ಮದ್ಯವು ರಾಜ್ಯದ ಇತರೆ ಭಾಗಗಳಿಗೂ ವಿತರಣೆಯಾಗಿರಬಹುದು. ಅದರ ಸೇವನೆಯು ಜೀವ ಹಾಗೂ ಆರೋಗ್ಯಕ್ಕೆ ಗಂಭೀರ ಅಪಾಯವನ್ನು ಉಂಟುಮಾಡಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.