ಮಣಿಪಾಲ: ವಿಶ್ವ ಕಲಾ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ & ಗ್ಯಾಲರಿಯ ವಿದ್ಯಾರ್ಥಿನಿಯರು ಅತ್ಯಂತ ವಿಭಿನ್ನವಾಗಿ ಸಂಭ್ರಮಿಸಿದ್ದಾರೆ.

ಲಿಯೋನಾರ್ಡೊ ಡಾ ವಿಂಚಿ ಅವರ ಜನ್ಮದಿನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ವಿದ್ಯಾರ್ಥಿನಿಯರಾದ ಸ್ಮೃತಿ ತುಂಗ ಪಿ., ಪ್ರಣತಿ ಬಿ. ಶೆಟ್ಟಿ ಮತ್ತು ಸುಪರ್ಣ ಸುವರ್ಣ ಅವರು ಕೇವಲ ಎರಡು ದಿನಗಳ ಅವಧಿಯಲ್ಲಿ ಬಟ್ಟೆಯ ಚೂರುಗಳನ್ನು ಬಳಸಿ ಸುಮಾರು 50 ಚದರ ಅಡಿ ವಿಸ್ತೀರ್ಣದ ಬೃಹತ್ ಬುದ್ಧನ ಕಲಾಕೃತಿಯನ್ನು ಸಿದ್ಧಪಡಿಸಿ ಅನಾವರಣ ಗೊಳಿಸಿದ್ದಾರೆ.

ಈ ಕಲಾಕೃತಿಯನ್ನು ಪೂರ್ಣಗೊಳಿಸಲು ತಂಡವು ತಮ್ಮ ಮಾರ್ಗದರ್ಶಕ ಹರೀಶ್ ಸಾಗಾ ಅವರ ಮಾರ್ಗದರ್ಶನದಲ್ಲಿ ಹಗಲಿಡೀ ಶ್ರಮಿಸಿದ್ದಾರೆ. ಈ ಕಲಾಕೃತಿಯು ತಾಂತ್ರಿಕವಾಗಿ ಅತ್ಯಂತ ಜಟಿಲವಾಗಿದ್ದು, ಕಲಾವಿದರು ವೈವಿಧ್ಯಮಯ ಬಣ್ಣಗಳ ಬಟ್ಟೆಗಳನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ಅವುಗಳನ್ನು ಬಹಳ ನಾಜೂಕಾಗಿ ಬಟ್ಟೆಯ ಮೇಲೆ ಅಂಟಿಸುವ ಮೂಲಕ ಬುದ್ಧನ ಮುಖದ ವಿವಿಧ ಭಾವನೆಗಳನ್ನು ಮತ್ತು ಛಾಯೆಗಳನ್ನು ಅದ್ಭುತವಾಗಿ ಮೂಡಿಸಿದ್ದಾರೆ.

ಕೇವಲ 48 ಗಂಟೆಗಳ ಅಲ್ಪ ಅವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಕೆಲಸವನ್ನು ಪೂರ್ಣಗೊಳಿಸಿರುವುದು ವಿದ್ಯಾರ್ಥಿನಿಯರ ಏಕಾಗ್ರತೆ ಮತ್ತು ಕಲಾ ಪ್ರೇಮಕ್ಕೆ ಸಾಕ್ಷಿಯಾಗಿದೆ.