ಮಂಡ್ಯ: ಕೆಮಿಕಲ್‌ ಸೋರಿಕೆಯಿಂದ ಸ್ಫೋಟ ಸಂಭವಿಸಿ, ದುರಂತ ಘಟನೆಯಲ್ಲಿ ಇಬ್ಬರ ಸಾವಾಗಿದೆ. ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯದ ಬಸರಾಳುವಿನ ಕಾರೆಕಟ್ಟೆ ಬಳಿ ನಡೆದಿದೆ.

ರಾಸಾಯನಿಕವಿದ್ದ ಬೃಹತ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಸಾಯನಿಕ ಕಾರ್ಖಾನೆಯಲ್ಲಿ ದುರ್ಘಟನೆ ನಡೆದಿದ್ದು, ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಘಟನೆಯ ಘೋರತೆ ಎಷ್ಟಿತ್ತೆಂದರೆ ಮೃತರ ದೇಹಗಳು ಛಿದ್ರ ಛಿದ್ರವಾಗಿ ಬಿದ್ದಿದೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವನ ಕೈ ತುಂಡಾಗಿದೆ. ಗಾಯಾಳುಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ಮತ್ತು ಗಾಯಾಳುಗಳ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

ದುರ್ಘಟನೆಯ ಬಳಿಕ ಕಾರ್ಖಾನೆಯವರು ಸ್ಥಳದಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಬಸರಾಳು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಮತ್ತು ಗಾಯಾಳುಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಹಿಂದೆ ರಾಸಾಯನಿಕ ಕಾರ್ಖಾನೆ ಸ್ಥಾಪಿಸದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಕಾರ್ಖಾನೆಯನ್ನು ಸ್ಥಳಾಂತರಿಸುತ್ತಿದ್ದಾಗಲೇ ಈ ದುರಂತ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ.