ಯಾದಗಿರಿ: ಯಾದಗಿರಿ ಜಿಲ್ಲೆಯಾದ್ಯಂತ ಮಳೆರಾಯನ ಅಬ್ಬರ ಜೋರಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ನಗರದ ಹಲವು ಕಡೆ ರಸ್ತೆಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು, ಅಂಗಡಿ, ಶಾಲೆ ಹಾಗೂ ಮನೆಗಳಿಗೂ ಸಹ ನೀರು ನುಗ್ಗಿದೆ.

ಮಳೆಯಿಂದಾಗಿ ಯಾದಗಿರಿ ತಾಲೂಕಿನ ಪಗಲಾಪುರ ಬಳಿಯ ಸೇತುವೆ ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು, ಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದ್ದ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಸ್ಥಳದಲ್ಲಿ ಪೊಲೀಸರನ್ನ ನಿಯೋಜನೆ ಮಾಡಿ ವಾಹನಗಳು ಸಂಚಾರ ಮಾಡದಂತೆ ಕ್ರಮ ವಹಿಸಲಾಗಿದೆ.

ಕೊಯಿಲೂರ್ ಗ್ರಾಮದ ಪ್ರತಿಯೊಂದು ರಸ್ತೆಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿವೆ. ಗ್ರಾಮದಲ್ಲಿ ಜನ ಓಡಾಡುವುದಕ್ಕೂ ಸಹ ಕಷ್ಟ ಆಗಿದೆ. ಇದೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೂ ನೀರು ನುಗ್ಗಿದೆ. ಮಳೆ ನೀರು ನುಗ್ಗಿದ್ದರಿಂದ ಶಾಲೆಯ ಮೈದಾನ ಸ್ವೀಮಿಂಗ್ ಫುಲ್ ಆಗಿ ಬದಲಾಗಿದೆ. ಇನ್ನು ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ.

ಮಳೆ ನೀರು ಹೊರ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ. ಇನ್ನು ಮಳೆ ನೀರಿನಿಂದ ಹಾನಿಗೊಳಗಾದ ಪ್ರದೇಶಕ್ಕೆ ಯಾದಗಿರಿ ತಹಶೀಲ್ದಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾದಗಿರಿ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ರಸ್ತೆಗಳು ಜಮೀನುಗಳು ಜಲಾವೃತ್ತಗೊಂಡಿದ್ದು, ಜನ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅಧಿಕಾರಿಗಳು ಮನೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕಾಗಿದೆ.