ವಿಜಯಪುರ : ರಾಜ್ಯದಲ್ಲಿ ನಡೆಯುತ್ತಿರುವ ಎಟಿಎಂ ದರೋಡೆ ಪ್ರಕರಣದಿಂದಾಗಿ ಎಲ್ಲರೂ ಬೆಚ್ಚಿಬೀಳಿಸಿದ್ದು, ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಸರ್ಕಾರ ಬ್ಯಾಂಕ್ ದರೋಡೆಕಾರರ ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಲಿ ಎಂದು ಆದೇಶಿಸಿದ್ದಾರೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, ಸಾರ್ವಜನಿಕರ, ಹೂಡಿಕೆದಾರರ, ಸಂಘ, ಸಂಸ್ಥೆಗಳ ಹಣವು ಬ್ಯಾಂಕ್ ಗಳಲ್ಲಿ ಸುರಕ್ಷಿತವಾಗಿರುತ್ತದೆ ಎಂದು ಇಡುತ್ತಾರೆ. ದುಷ್ಕರ್ಮಿಗಳು ಅಂತಹ ಹಣವನ್ನು ದೋಚುವ ಮೂಲಕ ಸಾರ್ವಜನಿಕರ ಹಣವನ್ನೇ ದೋಚಿದಂತಾಗುತ್ತದೆ ಎಂದರು.
ಅಲ್ಲದೇ ದರೋಡೆಕಾರರು, ಅಪಹರಣಕಾರರು, ಕೊಲೆ-ಸುಲಿಗೆ ಮಾಡುವವರ ಮೇಲೆ ಸರ್ಕಾರ ಝೀರೋ ಟಾಲರೆನ್ಸ್ ನಿಯಮ ಅನುಸರಿಸಿ ಅವರ ಗುರುತು ಪತ್ತೆಹಚ್ಚಿ ಶರಣಾಗದೆ ಇದ್ದರೆ, ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಬ್ಯಾಂಕ್ ನ ಸಿ.ಸಿ. ಕ್ಯಾಮೆರಾ ಕೆಲಸ ಮಾಡುತ್ತಿರಲಿಲ್ಲ ಎಂದು ಗೊತ್ತಾಗಿದೆ. ಈ ರೀತಿ ವೈಫಲ್ಯಗಳು ಆಗದೆ ಮುಂಜಾಗ್ರತಾ ಕ್ರಮ ವಹಿಸಿದರೆ ಮಾತ್ರ ಈ ರೀತಿ ಕೃತ್ಯಗಳನ್ನು ತಡೆಯಬಹುದು ಎಂದು ಬಸನಗೌಡ ಯತ್ನಾಳ್ ತಿಳಿಸಿದರು.
ಇನ್ನು ಸಾರ್ವಜನಿಕರ, ಬ್ಯಾಂಕ್ ಗ್ರಾಹಕರ ಹಾಗೂ ಬ್ಯಾಂಕ್ ನ ಹಿತದೃಷ್ಟಿಯಿಂದ ಹಾಗೂ ಸುರಕ್ಷತೆಗೆ ಪೊಲೀಸ್ ರಕ್ಷಣೆ ಅಗತ್ಯವಾಗಿದೆ ಹೀಗಾಗಿ ಅತಿ ಹೆಚ್ಚು ನಗದು ವಹಿವಾಟು ನಡೆಸುವ ಬ್ಯಾಂಕ್ ಗಳಿಗೆ ಹೆಚ್ಚಿನ ಪೊಲೀಸ್ ರಕ್ಷಣೆ ನೀಡಬೇಕು ಎಂದು ಸಲಹೆ ನೀಡಿದರು.
ಕರೆನ್ಸಿ ಸಾಗಿಸುವ ವಾಹನಗಳಲ್ಲಿ ಕನಿಷ್ಠ ಇಬ್ಬರು ಗಾರ್ಡ್ ಗಳು ಇರಬೇಕು ಹಾಗೂ ಅತಿ ಹೆಚ್ಚು ನಗದು ಸಾಗಿಸುವಾಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವಾಹನ ಹೊರಡಬೇಕು ಬ್ಯಾಂಕ್ ಗಳು ತಮ್ಮ ATM ಗಳಲ್ಲಿ ಸುರಕ್ಷತೆ, ಸಿ.ಸಿ. ಕ್ಯಾಮೆರಾ, ಸಶಸ್ತ್ರ ಗಾರ್ಡ್ ಕಡ್ಡಾಯವಾಗಿ ನೇಮಿಸಬೇಕು ಎಂದು ಯತ್ನಾಳ್ ಬರೆದುಕೊಂಡಿದ್ದಾರೆ.

