ಉಡುಪಿ: ಶ್ರೀಕೃಷ್ಣ ದೇವರ ದರ್ಶನಕ್ಕೆ ತೆರಳುವ ಮಾರ್ಗದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ಪ್ರತಿಯೊಬ್ಬ ಭಕ್ತರಿಗೂ ದೇವರ ದರ್ಶನವಾಗಬೇಕೆನ್ನುವ ನಿಟ್ಟಿನಲ್ಲಿ ನೂತನ ಪಥಕ್ಕೆ ತಯಾರಿ ಮಾಡಲಾಗಿದೆ ಎಂದು ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳಾತ್ತಾಯ ತಿಳಿಸಿದ್ದಾರೆ.
ಶ್ರೀಕೃಷ್ಣನ ದರ್ಶನವನ್ನು ಕನಕನ ಕಿಂಡಿಯಲ್ಲಿ ಮಾಡಿಕೊಂಡು ಶ್ರೀಚಂದ್ರಮೌಳೀಶ್ವರ, ಶ್ರೀಅನಂತೇಶ್ವರ ದೇವರ, ಶ್ರೀಮನ್ ಮಧ್ವಾಚಾರ್ಯರು ಅದೃಶ್ಯರಾದ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀಕೃಷ್ಣ ಮಠಕ್ಕೆ ಪ್ರವೇಶಿಸಿ ನವಗ್ರಹ ಕಿಂಡಿಯಲ್ಲಿ ಭಗವಂತನ ದರ್ಶನ ಮಾಡಿ ತೆರಳುವಂತೆ ಮಾರ್ಗ ಮಾಡಲಾಗುತ್ತದೆ. ದೇವಳಕ್ಕೆ ತೆರಳುವ ಮಾರ್ಗದಲ್ಲಿ ಸೇವಾ ಕೌಂಟರ್, ಮಾಹಿತಿ ಕೌಂಟರ್ಗಳನ್ನು ತೆರೆಯಲಾಗುತ್ತದೆ ಎಂದು ತಿಳಿಸಿದರು.
ಪಾನೀಯ ವ್ಯವಸ್ಥೆ:
ಬೇಸಿಗೆಯ ಬಿಸಿಲಿನ ಝಳ ಹೆಚ್ಚಿದ್ದು, ಸರತಿ ಸಾಲಿನಲ್ಲಿ ಬರುವ ಭಕ್ತರಿಗೆ ಈ ಬೇಸಿಗೆಯಲ್ಲಿ ತಂಪು ಪಾನೀಯ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನದ ತನಕ ನಿಂಬೆಹಣ್ಣು, ಕಬ್ಬು ಸಹಿತ ಇನ್ನಿತರ ವಿಧದ ದಿನಕ್ಕೊಂದು ರೀತಿಯ ಪಾನೀಯಗಳನ್ನು ಮಾಡಿ ವಿತರಿಸಲು ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು.
ಮಠದಲ್ಲಿ ಭೋಜನ ವ್ಯವಸ್ಥೆಯಿರುವ ಎಲ್ಲಾ ಕಡೆಗಳಲ್ಲೂ ಎಲ್ಲಾ ವಿಧದ ಭಕ್ತ ಜನರಿಗೆ ಸರಿಸಮಾನವಾದ ಶ್ರೀಕೃಷ್ಣನ ಅನ್ನ ಪ್ರಸಾದ ದೊರೆಯಬೇಕೆಂಬ ಉದ್ದೇಶದಿಂದ ಎಲ್ಲಾ ಕಡೆಗಳಲ್ಲೂ 10 ರಿಂದ 12 ಪದಾರ್ಥಗಳನ್ನು ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಉದಯ ಕುಮಾರ್ ಸರಳಾತ್ತಾಯ ತಿಳಿಸಿದರು.

