ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಸಂಭವಿಸಿದ ಪಿಜಿ ವೈದ್ಯೆ ಡಾ. ಲಾವಣ್ಯ ಅವರ ಸಾವಿನ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಡಾ. ಲಾವಣ್ಯ ಅವರ ಕುಟುಂಬ ಮನವಿ ಮಾಡಿಕೊಂಡಿದೆ.
ಮಾರ್ಚ್ 12 ರಂದು ಶಿವಮೊಗ್ಗದ ಮೆಗಾನ್ ಆಸ್ಪತ್ರೆಯ ಆವರಣದಲ್ಲಿ ನಡೆದ ಅತ್ಯಂತ ಭೀಕರ ಮತ್ತು ದುರದೃಷ್ಟಕರ ಘಟನೆ ನಡೆದಿದ್ದು, ಮೆಗ್ಗಾನ್ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ (Pediatric) ಪಿಜಿ ವಿದ್ಯಾರ್ಥಿನಿಯಾಗಿದ್ದ ಡಾ. ಲಾವಣ್ಯ ಅವರು ಆಸ್ಪತ್ರೆಯ ಆವರಣದಲ್ಲೇ ನಡೆದ ಅಪಘಾತದಲ್ಲಿ ಬಲಿಯಾಗಿದ್ದಾರೆ.
ಅಂದು ಡಾ. ಲಾವಣ್ಯ ಅವರು ಆಸ್ಪತ್ರೆಯಿಂದ ಹಾಸ್ಟೆಲ್‌ಗೆ ತಮ್ಮ ಸ್ಕೂಟರ್‌ಲ್ಲಿ ತೆರಳುತ್ತಿದ್ದರು. ಅವರು ಯಾವಾಗಲೂ ಅತ್ಯಂತ ಜಾಗರೂಕತೆಯಿಂದ ಮತ್ತು ನಿಧಾನವಾಗಿ ವಾಹನ ಚಲಾಯಿಸುವ ಅಭ್ಯಾಸವುಳ್ಳವರಾಗಿದ್ದರು. ಆದರೆ, ಕಾಲೇಜು ಆವರಣದೊಳಗೆ ತಪ್ಪು ದಿಕ್ಕಿನಲ್ಲಿ ಅತಿ ವೇಗವಾಗಿ ಬಂದ ನೀರಿನ ಟ್ಯಾಂಕರ್, ಲಾವಣ್ಯ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್‌ನಿಂದ ಕೆಳಗೆ ಬಿದ್ದ ಲಾವಣ್ಯ ಅವರ ತಲೆಯ ಮೇಲೆ ಟ್ಯಾಂಕರ್ ಹಿಂಬದಿಯ ಚಕ್ರ ಹರಿದ ಪರಿಣಾಮ, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಡಾ. ಲಾವಣ್ಯ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದವರಾಗಿದ್ದು, ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಏಕೈಕ ಪುತ್ರಿ. ವೈದ್ಯೆಯಾಗಿ ಸಮಾಜ ಸೇವೆ ಮಾಡಬೇಕೆಂಬ ಕನಸು ಕಂಡಿದ್ದ ಇವರು, ಎಂಬಿಬಿಎಸ್ ಮುಗಿಸಿ ಒಂದು ವರ್ಷ ಕಠಿಣ ಪರಿಶ್ರಮ ಪಟ್ಟು ಓದಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಡಿ (MD) ಸೀಟು ಪಡೆದಿದ್ದರು. ಆ ಕುಟುಂಬದ ಮೊದಲ ವೈದ್ಯೆಯಾಗಿದ್ದ ಲಾವಣ್ಯ ಅವರ ಮೇಲೆ ತಾಯಿ ಮತ್ತು ಕುಟುಂಬದವರು ಅಪಾರ ಭರವಸೆ ಇಟ್ಟುಕೊಂಡಿದ್ದರು. ಆದರೆ ಬೇರೆಯವರ ನಿರ್ಲಕ್ಷ್ಯದಿಂದ ಇಂದು ಒಬ್ಬ ಪ್ರತಿಭಾವಂತ ವೈದ್ಯ ಅರಳುವ ಮುನ್ನವೇ ಬಾಡಿ ಹೋಗಿದ್ದಾರೆ.
ಇದು ಕೇವಲ ಅಪಘಾತವಲ್ಲ, ಇದೊಂದು ಸಾಂಸ್ಥಿಕ ನಿರ್ಲಕ್ಷ ಎಂದು ಡಾ. ಲಾವಣ್ಯ ಕುಟುಂಬ ಆಡಳಿತ ಮಂಡಳಿಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದೆ. ವಿದ್ಯಾರ್ಥಿಗಳು ಮತ್ತು ರೋಗಿಗಳು ಓಡಾಡುವ ಕಾಲೇಜಿನಲ್ಲಿ ಭಾರಿ ವಾಹನಗಳ ಪ್ರವೇಶ ಮಾಡುವುದು ತಪ್ಪು.ಆವರಣದೊಳಗೆ ಕೆಲಸದ ಸಮಯದಲ್ಲಿ ಭಾರಿ ಗಾತ್ರದ ನೀರಿನ ಟ್ಯಾಂಕರ್ ಪ್ರವೇಶ ಮಾಡಿದೆ.
ಆವರಣದೊಳಗೆ ಟ್ಯಾಂಕರ್ ತಪ್ಪು ದಿಕ್ಕಿನಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದರೂ ಅಲ್ಲಿದ್ದ ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು?. ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಇರುವ ಕ್ರಮಗಳೇನು? ಎಂದು ಕಾಲೇಜು ಆಡಳಿತ ಮಂಡಳಿಯನ್ನು ಪ್ರಶೆ ಮಾಡಿದೆ.
ಈ ಘಟನೆಗೆ ಮೆಗಾನ್ ಆಸ್ಪತ್ರೆಯ ಆಡಳಿತ ಮಂಡಳಿಯೇ ನೇರ ಹೊಣೆ ಹೊರಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದ ಟ್ಯಾಂಕರ್ ಮಾಲೀಕರು ಮತ್ತು ಚಾಲಕನ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಾಲೇಜು ಆವರಣದೊಳಗೆ ಬಾರಿ ವಾಹನಗಳ ಸಂಚಾರವನು ಸಂಪೂರ್ಣವಾಗಿ ನಿಷೇಧಿಸಬೇಕು. ಡಾ. ಲಾವಣ್ಯ ಅವರ ಸಾವು ಕೇವಲ ಒಂದು ಕುಟುಂಬದ ನಷ್ಟವಲ್ಲ, ಇದು ಇಡೀ ಸಮಾಜಕ್ಕೆ ಆದ ದೊಡ್ಡ ನಷ್ಟವಾಗಿದೆ ಎಂದು ಡಾ. ಲಾವಣ್ಯ ಅವರ ಕುಟುಂಬ ಆಗ್ರಹಿಸಿದೆ.

