ಉಡುಪಿ: ಪರ್ಯಾಯ ಶ್ರೀ ಶೀರೂರು ಮಠದ ವತಿಯಿಂದ ಹಿರಿಯಡಕ ಸಮೀಪದ ಶೀರೂರು ಮೂಲ ಮಠದಲ್ಲಿ 72ನೇ ಉತ್ಸವವನ್ನಾಗಿ ಮಾ. 25 ರಿಂದ 28 ರ ವರೆಗೆ ಶ್ರೀರಾಮನವಮೀ ಮಹೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಶ್ರೀಮಠದ ದಿವಾನ ಡಾ. ಉದಯ ಕುಮಾರ್ ಸರಳಾತ್ತಾಯ ತಿಳಿಸಿದ್ದಾರೆ.
ಶೀರೂರು ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರಯ, ಮಾ. 25ರಂದು ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಪಟ್ಟದ ದೇವರ ಪೂಜೆ, ಮಾ. 26 ರಂದು ಸಂಜೆ ಕಟ್ಟೆ ಪೂಜೆ, ಮಾ. 27 ರಂದು ಬೆಳಗ್ಗೆ 7 ಗಂಟೆಯಿಂದ ಪಂಚಾಮೃತ ಸಹಿತ ವಿಶೇಷ ಪೂಜೆ, ಪವಮಾನ ಕಲಶಾಭಿಶೇಕ, ಶ್ರೀಮುಖ್ಯಪ್ರಾಣ ದೇವರ ಪೂಜೆ, ಪಲ್ಲ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ಇತ್ಯಾದಿ ದೇವತಾ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಮಾ. 27, ಬೆಳಗ್ಗೆ 10 ಗಂಟೆಗೆ ಉಡುಪಿ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರಿಂದ ಸಂಸ್ಥಾನ ಪೂಜೆ ಹಾಗೂ ರಾಯಚೂರು ಶ್ರೀಶೇಷಗಿರಿದಾಸರು ಮತ್ತು ಅವರ ಬಳಗದಿಂದ ದಾಸವಾಣಿ (ಸಂಗೀತ) ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ಗೆಜ್ಜೆಗಿರಿ ಮೇಳದಿಂದ ಶ್ರೀಕೃಷ್ಣ ಲೀಲಾಮೃತ ಎನ್ನುವ ಯಕ್ಷಗಾನ ಬಯಲಾಟ ನಡೆಯಲಿದೆ. ಸಂಜೆ 4.30 ಕ್ಕೆ ಶ್ರೀಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಆಗಮನ ಮತ್ತು ಪ್ರಾಣದೇವರಿಗೆ ರಂಗಪೂಜೆ ನಂತರ 7 ಗಂಟೆಗೆ ಮಹಾರಥೋತ್ಸವ ಹಾಗೂ ಓಲಗಮಂಟಪ ಪೂಜೆ ನಡೆಯಲಿದೆ ಎಂದು ತಿಳಿಸಿದರು.
ಮಾ. 28ರಂದು ಬೆಳಿಗ್ಗೆ 9 ಗಂಟೆಗೆ ಹಗಲು ರಥೋತ್ಸವ ಮತ್ತು ಸುವರ್ಣ ನದಿಯಲ್ಲಿ ಅವಭೃತ ಸ್ನಾನ ಕಾರ್ಯಕ್ರಮ ನಡೆಯಲಿದೆ. ಶ್ರೀಕೃಷ್ಣಾಪುರ ಮಠಾಧೀಶರ ಸಂಸ್ಥಾನ ಪೂಜೆ ನಡೆಯಲಿದೆ. ರಾತ್ರಿ 9 ಗಂಟೆಗೆ ಶ್ರೀಮಠದ ದೈವ ಬೊಬ್ಬರ್ಯ ದೈವದ ಕೋಲವೂ ನಡೆಯಲಿದೆ ಎಂದು ತಿಳಿಸಿದರು.

