ಉಡುಪಿ: ಬಸ್ ಪ್ರಯಾಣದ ವೇಳೆ ತಮಗೆ ಆದ ಕಹಿ ಅನುಭವವನ್ನು ಹಂಚಿಕೊಂಡಿರುವ ಮಹಿಳೆಯೊಬ್ಬರು, ಸಾರಿಗೆ ವ್ಯವಸ್ಥೆಯ ಮೇಲಿನ ನಿರ್ಲಕ್ಷ್ಯ ಮತ್ತು ಪ್ರಯಾಣಿಕರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಕಾರ್ಕಳದ ರಮಿತಾ ಸೂರ್ಯವಂಶಿ ಎಂಬವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು, ತಾವು ಎದುರಿಸಿದ ತೊಂದರೆಗಳನ್ನು ವಿವರಿಸಿದ್ದಾರೆ. ಅವರು ನೀಡಿದ ಮಾಹಿತಿಯಂತೆ, ಬೆಂಗಳೂರಿನಿಂದ ಪುತ್ತೂರಿಗೆ ಪ್ರಯಾಣಿಸಲು ಖಾಸಗಿ ಬಸ್‌ನ್ನು ಬುಕ್ ಮಾಡಿದ್ದರು. ಪ್ರಯಾಣದ ದಿನ ಸಂಜೆ, ತಾವು ಹತ್ತಬೇಕಿದ್ದ ಬಸ್ ಕೆಟ್ಟು ಹೋಗಿದೆ ಎಂದು ಕರೆ ಬಂದಿದ್ದು, ಮಜೇಸ್ಟಿಕ್‌ನಿಂದ ಮತ್ತೊಂದು ಬಸ್ ಹಿಡಿಯುವಂತೆ ತಿಳಿಸಲಾಗಿದೆ. ಅದಕ್ಕಾಗಿ ಬೇರೆ ಬಸ್ ಪಿಕ್ ಮಾಡಲು ವಾಹನವನ್ನು ಕಳುಹಿಸಲಾಗಿತ್ತು.

ಮಜೆಸ್ಟಿಕ್‌ಗೆ ತಲುಪಿದ ಬಳಿಕ, ನೀಡಲಾದ ಬಸ್‌ನಲ್ಲಿ ಬುಕ್ ಮಾಡಿದ ಸೀಟ್‌ಗಳೇ ನೀಡಲಾಗಿದ್ದರೂ, ಆ ಬಸ್ ಪುತ್ತೂರಿಗೆ ಹೋಗುವುದಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಸಿಬ್ಬಂದಿಯಿಂದ ಪುತ್ತೂರಿನಲ್ಲಿ ಇಳಿಸಲಾಗುತ್ತದೆ ಎಂದು ಭರವಸೆ ನೀಡಲಾಗಿದ್ದರೂ, ಪ್ರಯಾಣದ ವೇಳೆ ಬಸ್ ಮಾಣಿ ಮಾರ್ಗವಾಗಿ ದೇರಳಕಟ್ಟೆಯತ್ತ ಸಾಗುತ್ತಿರುವುದು ಗಮನಕ್ಕೆ ಬಂದಿದೆ.

ಈ ಬಗ್ಗೆ ಪ್ರಶ್ನಿಸಿದಾಗ, ಬಸ್ ಪುತ್ತೂರಿಗೆ ಹೋಗುವುದಿಲ್ಲ, ಬಿಸಿರೋಡ್ ಅಥವಾ ಮಂಗಳೂರಿನಲ್ಲಿ ಇಳಿಯಬೇಕೆಂದು ಸಿಬ್ಬಂದಿ ತಿಳಿಸಿದ್ದಾಗಿ ಅವರು ಆರೋಪಿಸಿದ್ದಾರೆ. ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಕಾರಣ ತೀವ್ರ ಆತಂಕ ಅನುಭವಿಸಿದ್ದಾಗಿ ತಿಳಿಸಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬಸ್ ಸಂಸ್ಥೆಯ ನಿರ್ವಹಣೆಯಲ್ಲಿನ ಗೊಂದಲ ಹಾಗೂ ಪ್ರಯಾಣಿಕರಿಗೆ ನೀಡಲಾಗುವ ತಪ್ಪು ಮಾಹಿತಿಯಿಂದ ಇಂತಹ ಸಮಸ್ಯೆಗಳು ಉಂಟಾಗುತ್ತಿವೆ ಎಂಬ ಆಕ್ಷೇಪ ಕೇಳಿಬಂದಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಸೇವಾ ಗುಣಮಟ್ಟದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

View this post on Instagram

A post shared by News Karnataka (@newskarnataka)