ಮಂಗಳೂರು: ಸ್ತನ ಕ್ಯಾನ್ಸರ್‌ ಕಾಯಿಲೆಯ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವ ಮತ್ತು ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶೇಷ ಸ್ತನ ಆರೋಗ್ಯ ತಪಾಸಣೆ ಉಪಕ್ರಮವನ್ನು ಮಂಗಳೂರು, ಡಾ ಬಿ ಆರ್ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆ ಘೋಷಿಸಿದೆ.

ಮೇ 5 ರಿಂದ 16 ರವರೆಗಿನ ಅವಧಿಯ ಅಭಿಯಾನದ ಭಾಗವಾಗಿ, ₹1200 ವಿಶೇಷ ಬೆಲೆಯಲ್ಲಿ ಬೈಲ್ಯಾಟರಲ್‌ ಮ್ಯಾಮೊಗ್ರಾಮ್‌ ಸ್ಕ್ರೀನಿಂಗ್‌ ಸೌಲಭ್ಯ ನೀಡಲಾಗುವುದು. ಈ ಮೂಲಕ ಅತ್ಯಗತ್ಯ ತಪಾಸಣಾ ಸೇವೆಯನ್ನು ಮಂಗಳೂರಿನಾದ್ಯಂತ ಮಹಿಳೆಯರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಹೊಂದಿದೆ.

ವಿಶೇಷವಾಗಿ 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮತ್ತು ಸ್ತನ ಕ್ಯಾನ್ಸರ್‌ನ ಕೌಟುಂಬಿಕ ಇತಿಹಾಸ ಹೊಂದಿರುವ ಮಹಿಳೆಯರಲ್ಲಿ ಕಾಯಿಲೆ ಲಕ್ಷಣಗಳನ್ನು ಅರಿಯಲು ಈ ವಾರ್ಷಿಕ ತಪಾಸಣೆಯನ್ನು ಉತ್ತೇಜಿಸಲು ಈ ಉಪಕ್ರಮವನ್ನು ಪರಿಚಯಿಸಲಾಗಿದೆ. ವಿಶೇಷ ಸ್ತನದ ಎಕ್ಸ್-ರೇ ಮೂಲಕ ಆರಂಭಿಕ ಕಾಯಿಲೆ ಪತ್ತೆ ಹಚ್ಚುವಿಕೆಯು, ಚಿಕಿತ್ಸೆಯ ಫಲಿತಾಂಶ ಮತ್ತು ಬದುಕುಳಿಯುವಿಕೆಯ ಪ್ರಮಾಣವನ್ನು ಸುಧಾರಿಸುತ್ತದೆ.

ಆದರೆ ಅನೇಕ ಮಹಿಳೆಯರು ವೆಚ್ಚದ ಆತಂಕ ಅಥವಾ ಅರಿವಿನ ಕೊರತೆಯಿಂದಾಗಿ ಸ್ಕ್ರೀನಿಂಗ್ ವಿಚಾರದಲ್ಲಿ ವಿಳಂಬ ಮಾಡುತ್ತಾರೆ. ಆದರೆ, ಕಡಿಮೆ ಬೆಲೆಯಲ್ಲಿ ಮ್ಯಾಮೋಗ್ರಾಮ್‌ ಸೌಲಭ್ಯ ನೀಡುವ ಮೂಲಕ, ಆಸ್ಪತ್ರೆಯು ಪೂರ್ವಭಾವಿ ಆರೋಗ್ಯ-ಅಪೇಕ್ಷಿತ ನಡವಳಿಕೆ ಹೆಚ್ಚಿಸಲು ಪ್ರಯತ್ನಿಸುತ್ತದೆ.

ಆಸ್ಪತ್ರೆಯ ಅತ್ಯಾಧುನಿಕ ರೇಡಿಯಾಲಜಿ ಮೂಲಸೌಕರ್ಯ ಮತ್ತು ಅನುಭವಿ ಮಹಿಳಾ ರೇಡಿಯಾಲಜಿಸ್ಟ್‌ಗಳು ಮತ್ತು ತಂತ್ರಜ್ಞರು ಈ ಸ್ಕ್ರೀನಿಂಗ್ ಸೇವೆಯನ್ನು ಒದಗಿಸುತ್ತಾರೆ.. ಸ್ಕ್ರೀನಿಂಗ್ ಆಯ್ಕೆ ಮಾಡಿಕೊಳ್ಳುವ ಮಹಿಳೆಯರು ಅಗತ್ಯವಿದ್ದರೆ ಹೆಚ್ಚಿನ ಮೌಲ್ಯಮಾಪನ ಮತ್ತು ಮಾರ್ಗದರ್ಶನಕ್ಕಾಗಿ ತಜ್ಞರ ಸಮಾಲೋಚನೆಗೆ ಪ್ರವೇಶವನ್ನು ಹೊಂದಿರುತ್ತಾರೆ. ಇದು ನಿಖರ ಮತ್ತು ವಿಶ್ವಾಸಾರ್ಹ ಫಲಿತಾಂಶಗಳನ್ನು ಖಚಿತಪಡಿಸುತ್ತದೆ. ಭಾನುವಾರ ಹೊರತುಪಡಿಸಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಸಮಯವಿದ್ದು, ಮುಂಚಿತವಾಗಿ ನೋಂದಾಯಿಸಿಕೊಳ್ಳಲು ಸೂಚಿಸಲಾಗುತ್ತದೆ.

ಉಪಕ್ರಮದ ಕುರಿತು ಮಾತನಾಡಿದ ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್‌ ಬ್ರೆಸ್ಟ್‌ ಸರ್ಜರಿ- ಡಾ. ಬಾಸಿಲಾ ಅಲಿ, “ಆರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್ʼನ ಲಕ್ಷಣಗಳನ್ನು ಪತ್ತೆ ಮಾಡಿದರೆ, ಅದನ್ನು ಗುಣಪಡಿಸಬಹುದು. ದುರದೃಷ್ಟವಶಾತ್, ತಪಾಸಣೆಯಲ್ಲಿ ವಿಳಂಬ ಮಾಡುವುದರಿಂದ ಅನೇಕ ಮಹಿಳೆಯರು ಮುಂದುವರಿದ ಹಂತಗಳಲ್ಲಿಯೂ ನಮ್ಮಲ್ಲಿಗೆ ಬರುತ್ತಾರೆ. ಕಾಯಿಲೆ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಅಸಹಜತೆಗಳನ್ನು ಗುರುತಿಸಲು ನಿಯಮಿತ ಮ್ಯಾಮೊಗ್ರಾಮ್ಸ್‌ ಸಹಾಯ ಮಾಡುತ್ತದೆ. ಈ ಅಭಿಯಾನದ ಮೂಲಕ, ಹೆಚ್ಚಿನ ಮಹಿಳೆಯರು ತಮ್ಮ ಸ್ತನ ಆರೋಗ್ಯಕ್ಕೆ ಆದ್ಯತೆ ನೀಡಲು ಮತ್ತು ಆರ್ಥಿಕ ಹಿಂಜರಿಕೆಯಿಲ್ಲದೆ ಸಕಾಲಿಕ ತಪಾಸಣೆಗೆ ಒಳಗಾಗಲು ಪ್ರೋತ್ಸಾಹಿಸುತ್ತೇವೆ.” ಎಂದರು.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ: +91 95359 00019