ಉಡುಪಿ: ಕಾರ್ಕಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳ ವತಿಯಿಂದ ಗುಡ್ಡೆಗುಳಿಗ ದೈವಸ್ಥಾನದಲ್ಲಿ ಕಾಲಾವಧಿ ಕೋಲ ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು.
ಹಲವಾರು ವರ್ಷಗಳ ಇತಿಹಾಸ ಇರುವ ಪೊಲೀಸ್ ಇಲಾಖೆಯ ವತಿಯಿಂದ ನಡೆಯುವ ಈ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ವಿಶೇಷವಾಗಿ ಉಡುಪಿ ಎಸ್ ಪಿ ಹರಿರಾಮ್ ಶಂಕರ್ ದಂಪತಿ ಆಗಮಿಸಿ ನೇಮೋತ್ಸವದಲ್ಲಿ ಭಾಗಿಯಾದರು.
ಶಾಸಕ, ಮಾಜಿ ಸಚಿವ ವಿ ಸುನಿಲ್ ಕುಮಾರ್, ಪೊಲೀಸ್ ಅಧಿಕಾರಿ ಸಿಬ್ಬಂದಿ ಮತ್ತು ಗುತ್ತು ಮನೆತನಗಳ ಪ್ರಮುಖರು ನೇಮೋತ್ಸವದಲ್ಲಿ ಭಾಗಿಯಾದರು. ದಾಸನೊಟ್ಟು ರಮೇಶ್ ಅವರು ದೈವಕ್ಕೆ ಪಾರಿ ಹೇಳಿ ಕಾರ್ಯಕ್ರಮ ಭಕ್ತಿ ಸಂಭ್ರಮದಿಂದ ನಡೆಯುವಲ್ಲಿ ಮಾರ್ಗದರ್ಶನ ಮಾಡಿದರು.
ಕಾರ್ಕಳ ತಾಲೂಕಿನಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ಪೊಲೀಸರೇ ಸೇರಿಕೊಂಡು ಗುಳಿಗ ದೈವಕ್ಕೆ ಹರಕೆ ಕೋಲ ಒಪ್ಪಿಸುತ್ತಾರೆ. ಕುಕ್ಕಂದೂರಿನ ಪೊಲೀಸ್ ವಸತಿ ಗೃಹದ ಬಳಿಯ ಹುಡೋ ಕಾಲನಿಯಲ್ಲಿ ಇರುವ ಗುಳಿಗ ದೈವಕ್ಕೆ ಪೊಲೀಸ್ ಇಲಾಖೆಯಿಂದ ಪ್ರತಿ ವರ್ಷ ಈ ರೀತಿ ಕೋಲದ ಹರಕೆ ಒಪ್ಪಿಸುವುದು ವಾಡಿಕೆಯಾಗಿ ಬಂದಿದೆ.
ಕಾರ್ಕಳ ಪೊಲೀಸ್ ಠಾಣೆ, ತಾಲೂಕು ಆಡಳಿತ, ರೆವಿನ್ಯೂ ಇಲಾಖೆ ಹೀಗೆ ಸರಕಾರಿ ವ್ಯವಸ್ಥೆಯಿಂದಲೇ ಗುಳಿಗನಿಗೆ ಹಲವಾರು ಹರಕೆ ಕೋಲ ಸಮರ್ಪಣೆಯಾಗುವುದು ಅಲ್ಲಿನ ವಿಶೇಷ.

