ಉಡುಪಿ: ಸಾರ್ವಜನಿಕರ ಬಹುದಿನಗಳ ಬೇಡಿಕೆ ಭಾಗಶಃ ಈಡೇರಿದೆ. ಜಿಲ್ಲೆಯ ಕಟಪಾಡಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಅಂಡರ್ ಪಾಸ್ ಕಾಮಗಾರಿ ವೇಗ ಪಡೆದುಕೊಂಡಿದೆ. ಈ ಭಾಗದಲ್ಲಿ ಅಂಡರ್ ಪಾಸ್ ಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ನಡೆದಿತ್ತು.

ಪ್ರತಿದಿನ ಸಂಚಾರಕ್ಕೆ ವಾಹನಗಳು ಕಷ್ಟಪಡುತ್ತಿದ್ದವು. ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದ್ದು ಅಪಘಾತಗಳು ನಿರಂತರವಾಗಿ ನಡೆಯುತ್ತಿದ್ದವು. ಕೊನೆಗೂ ಆರಂಭವಾದ ಅಂಡರ್ ಪಾಸ್ ಕಾಮಗಾರಿ ವೇಗದಿಂದ ಪೂರ್ಣಗೊಳ್ಳುವ ಹಾದಿ ಹಿಡಿದಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಮಗಾರಿ ನಡೆಯುವ ವೇಳೆ ನಿರಂತರ ಭೇಟಿಕೊಟ್ಟು ಪರಿಶೀಲನೆ ನಡೆಸುತ್ತಿದ್ದು, ಇದೀಗ ಏಕಮುಖ ಸಂಚಾರ ತೆರೆದುಕೊಂಡಿದೆ.

ಮಂಗಳೂರಿನಿಂದ ಉಡುಪಿ ಕಡೆಗೆ ಏಕಮುಖವಾಗಿ ವಾಹನ ಸಂಚರಿಸಬಹುದಾಗಿದೆ. ಇನ್ನೊಂದು ಮಾರ್ಗವನ್ನು ಈ ಮಳೆಗಾಲಕ್ಕೆ ಮುಂಚಿತವಾಗಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಉಡುಪಿ ಮಂಗಳೂರು ಸಂಪರ್ಕ ರಸ್ತೆಯಲ್ಲಿ ಇದೊಂದು ಪ್ರಮುಖ ಜಂಕ್ಷನ್ ಆಗಿದ್ದು, ಶೀಘ್ರವಾಗಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಬೇಕು ಅನ್ನೋದು ಸಾರ್ವಜನಿಕರ ಒತ್ತಾಯವಾಗಿತ್ತು. ಸದ್ಯ ಕೆಲ ಬದಲಿ ರಸ್ತೆಗಳಲ್ಲಿ ವಾಹನ ಸಂಚರಿಸುತ್ತಿದ್ದು ಸಾರ್ವಜನಿಕರು ಪ್ರತಿ ದಿನ ಪರದಾಡುತ್ತಿದ್ದಾರೆ. ಇದೀಗ ಆರಂಭವಾಗಿರುವ ಏಕಮುಖ ಸಂಚಾರದಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ.

ಇಂದಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಉಡುಪಿ ಚಿಕ್ಕಮಂಗಳೂರು ಸಂಸದರಾದ ಶ್ರೀನಿವಾಸ್ ಪೂಜಾರಿ ಚಾಲನೆ ನೀಡಿದರು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.