ನಂಜನಗೂಡು: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.89.58 ರಷ್ಟು ಫಲಿತಾಂಶ ಬಂದಿದ್ದು, ವಿದ್ಯಾರ್ಥಿನಿ ಚಂದು ಶೇ.91 ರಷ್ಟು ಫಲಿತಾಂಶ ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಸರಳಾ ಹೇಳಿದರು.
ಕಾಲೇಜಿನಲ್ಲಿ ಮೂರು ವಿಭಾಗಗಳಿದ್ದು, ವಿಜ್ಞಾನ ವಿಭಾಗದಲ್ಲಿ ಶೇ.85.7, ಕಲಾ ವಿಭಾಗದಲ್ಲಿ 82.38, ವಾಣಿಜ್ಯ ವಿಭಾಗಕ್ಕೆ 100 ರಷ್ಟು ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದ ಚಂದು 600ಕ್ಕೆ 546 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದ ಸುಶ್ಮಿತಾ 600ಕ್ಕೆ 542 ಅಂಕ ಪಡೆದು ದ್ವಿತೀಯ. ಕಲಾ ವಿಭಾಗದಲ್ಲಿ ಐಶ್ವರ್ಯ 600ಕ್ಕೆ 525 ಅಂಕಗಳನ್ನು ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.
ಕಾಲೇಜಿನಲ್ಲಿ ದ್ವಿತೀಯ ಒಟ್ಟು 48 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 6 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 26 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 3 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

