ಉಡುಪಿ: ಸಂಶೋಧಕ ಆರ್. ಮನೋಹರ್ ಅವರು ಆವಿಷ್ಕರಿಸಿರುವ ಅಗ್ಗದ 200 ಎಕ್ಸ್ ಹಾಗೂ ಅತ್ಯಂತ ಶಕ್ತಿಶಾಲಿ 240 ಎಕ್ಸ್ ಬೈನಾಕ್ಯುಲರ್‌ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಲಭಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಮನೋಹರ್, ತಾವು ಅಭಿವೃದ್ಧಿಪಡಿಸಿರುವ ಬೈನಾಕ್ಯುಲರ್ ಎರಡು ಕಣ್ಣಿನಿಂದ ವೀಕ್ಷಿಸಬಹುದಾದ ದೂರದರ್ಶಕವಾಗಿದ್ದು, ಸುಮಾರು 20 ಕಿ.ಮೀ. ದೂರದವರೆಗೆ ವೀಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.

ಅಗ್ಗದ 200 ಎಕ್ಸ್ ಬೈನಾಕ್ಯುಲರ್ ಹಾಗೂ 240 ಎಕ್ಸ್ ಸಾಮರ್ಥ್ಯದ ಅತ್ಯಂತ ಶಕ್ತಿಶಾಲಿ ಬೈನಾಕ್ಯುಲರ್ ಆವಿಷ್ಕಾರಕ್ಕಾಗಿ ಈ ಪ್ರಶಸ್ತಿ ದೊರೆತಿದೆ. ಇತ್ತೀಚೆಗೆ ಕಿದಿಯೂರು ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯಾ ಮುಖ್ಯಸ್ಥರು ಪ್ರಶಸ್ತಿ ಹಾಗೂ ಪ್ರಮಾಣಪತ್ರ ಪ್ರದಾನ ಮಾಡಿದರು. ಪ್ರಶಸ್ತಿಯ ಅಧಿಕೃತ ಪ್ರಮಾಣಪತ್ರ ಸೆಪ್ಟೆಂಬರ್ ಅಂತ್ಯದೊಳಗೆ ದೊರೆಯಲಿದೆ ಎಂದು ಮನೋಹರ್ ತಿಳಿಸಿದರು.