ರಾಯಚೂರು: ರಾಯಚೂರಿನ ಜಹಿರಾಬಾದ್‌ನ ಎಂ.ಈರಣ್ಣ ವೃತ್ತದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ.
14 ವರ್ಷದ ಸುಚಿತ್, 16 ವರ್ಷದ ಚರಣಕುಮಾರ್ ಮೃತ ದುರ್ದೈವಿಗಳು. 36 ವರ್ಷದ ವಿಜಯಕುಮಾರ್‌ಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆರವಣಿಗೆಯಲ್ಲಿ ನೂರಾರು ಜನರು ಭಕ್ತಿಯಿಂದ ಪಾಲ್ಗೊಂಡು ಸಾಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಏಕಾಏಕಿ ಜನರ ಗುಂಪಿಗೆ ನುಗ್ಗಿದೆ. ಪರಿಣಾಮವಾಗಿ ಸ್ಥಳದಲ್ಲಿದ್ದ ಬಾಲಕರು ಟ್ರ್ಯಾಕ್ಟರ್ ಚಕ್ರದಡಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡು ಅಂತಿಮ ಉಸಿರೆಳೆದಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಿಸಿಕೊಂಡಿದ್ದಾರೆ.

