ಉಡುಪಿ: ಇತ್ತೀಚಿಗೆ ಬ್ರಹ್ಮಾವರದಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಎಚ್ಎಂಸಿ ಯುನೈಟೆಡ್ ಟ್ರೋಫಿ 2026ಕ್ಕೆ ಕೆಲವು ಕಿಡಿಗೇಡಿಗಳ ಒಳಸಂಚಿನಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡು ವಿವಾದಕ್ಕೀಡಾಗಿತ್ತು. ಕಡೆಗೆ ಆಯೋಜಕರು ಟ್ರೋಫಿ ಹಾಗೂ ಬಹುಮಾನ ಮೊತ್ತದ ಇಪ್ಪತ್ತು ಲಕ್ಷ ರೂಪಾಯಿ ಹಣ ಸೆಮಿ ಫೈನಲ್ ಗೆ ತೇರ್ಗಡೆಗೊಂಡಿದ್ದ ನಾಲ್ಕು ತಂಡಗಳಿಗೆ ಸಮವಾಗಿ ಹಂಚಿ ನಾಣ್ಯ ಚಿಮ್ಮುವಿಕೆ ಮೂಲಕ ಚಾಂಪಿಯನ್ ತಂಡವನ್ನು ಆಯ್ಕೆ ಮಾಡಿ ವಿವಾದವನ್ನು ಸುಖ್ಯಾಂತಗೊಳಿಸಿದ್ದರು.
ತದನಂತರ ಆಯೋಜಕರು ಕಾನೂನಿನ ಮೊರೆ ಹೋಗಿ ಆರೋಪಿಗಳ ವಿರುದ್ಧ ಸಮರ ಸಾರಿದ್ದು , ಇದೀಗ ಉಡುಪಿ ಜಿಲ್ಲಾ ನ್ಯಾಯಾಲಯ ಪೊಲೀಸ್ ಇಲಾಖೆಗೆ ತನಿಖೆಗೆ ಆದೇಶ ನೀಡಿ ತೀರ್ಪು ನೀಡಿದೆ. ಇದು ಸತ್ಯಕ್ಕೆ ಸಂದ ಮೊದಲ ಜಯವಾಗಿದ್ದು, ಆಯೋಜಕರು ಈ ಪ್ರಕರಣವನ್ನು ಕಾನೂನಿನ ಮುಖಾಂತರ ಎದುರಿಸುವ ನಿಟ್ಟಿನಲ್ಲಿ ಕಾರ್ಯಪ್ರರ್ವತ್ತರಾಗಿದ್ದಾರೆ.
ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿಗಳಷ್ಟು ವೆಚ್ಚವನ್ನು ಭರಿಸಿ ಟೂರ್ನಮೆಂಟ್ ಆಯೋಜಿಸಿ ಬ್ರಹ್ಮಾವರಕ್ಕೆ ಹೆಸರು ತಂದಿದ್ದ ಎಚ್ಎಂಸಿ ಯುನೈಟೆಡ್ ಟ್ರೋಫಿ ಪಂದ್ಯಾವಳಿಯಲ್ಲಿ ಸೆಮಿ ಫೈನಲ್ ಪಂದ್ಯಾಟದ ಕೊನೆಯ ದಿನವಾದ ಜ. 25 ರಂದು ಜಾನ್ಸನ್ ಕುಂದಾಪುರ ಹಾಗೂ ಪಂಚಜನ್ಯ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ಅಂತಿಮ ಕ್ಷಣದಲ್ಲಿ ವಿವಾದ ಉಂಟಾಗಿ ಗೊಂದಲ ಸೃಷ್ಟಿಯಾಯಿತು. ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗಿದ್ದ ಕಾರಣ ಸಂಘಟಕರು ಪಂದ್ಯಾಟವನ್ನು ರದ್ದುಗೊಳಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪರ-ವಿರೋಧ ಚರ್ಚೆಗಳು ನಡೆದಿದ್ದವು.
ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಇತ್ಯರ್ಥಗೊಳಿಸಿ, ವಿವಾದಕ್ಕೆ ಕಾರಣವಾಗಿದ್ದ ಜಾನ್ಸನ್ ಕುಂದಾಪುರ ತಂಡವನ್ನು ಕೈಬಿಟ್ಟು, ಖುಷಿ ಅಮರ್ ಪಂಚಜನ್ಯ ತಂಡವನ್ನು ಸೆಮಿಫೈನಲ್ ಪ್ರವೇಶಿಸಿದ ತಂಡವೆಂದು ಘೋಷಿಸಿ, ಸೆಮಿಫೈನಲ್‌ಗೆ ಅರ್ಹತೆ ಪಡೆದ ಜಯಕರ್ನಾಟಕ ಬೆಂಗಳೂರು, ಫ್ರೆಂಡ್ಸ್ ಬೆಂಗಳೂರು, ಇಝಾನ್ ಚೈತನ್ಯ ಎಚ್.ಎಂ ಎಕ್ತಾ ಮತ್ತು ಖುಷಿ ಅಮರ್ ಪಂಚಜನ್ಯ ತಂಡಗಳ ನಡುವೆ ಅದೃಷ್ಟದ ಆಯ್ಕೆ ನಡೆಸಲಾಗಿತ್ತು.
ಇದೀಗ ಸಂಘಟಕರು ಟೂರ್ನಮೆಂಟ್ ಗೆ ಅಡಚಣೆ ಉಂಡು ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು ಸ್ವಾಗತಾರ್ಹ ಕ್ರಮ ಎಂದು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

