ನವದೆಹಲಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ ದರ್ಶನ್‌ ಈಗ ಎರಡನೇ ಬಾರಿ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಹಿರಿಯ ವಕೀಲ ಮುಕುಲ್ ರೋಹ್ಟಗಿ ಕಚೇರಿಯಿಂದ ದರ್ಶನ್‌ ಪರ ಜಾಮೀನು ಅರ್ಜಿ ಸಲ್ಲಿಕೆಯಾಗಿದೆ. ಜೈಲು ಸೇರಿದ 8 ತಿಂಗಳ ಬಳಿಕ ಈ ಅರ್ಜಿ ಸಲ್ಲಿಸಿದ್ದು, ಮೇ 4 ಕ್ಕೆ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. ಸಾಕ್ಷಿಗಳ ವಿಚಾರಣೆ ವಿಳಂಬವಾಗುತ್ತಿದೆ. ಟ್ರಯಲ್‌ನಲ್ಲಿ ಸಾಕ್ಷಿಗಳ ವಿಚಾರಣೆ ತಡ ಆದರೆ ಮುಕ್ತಾಯ ಆಗಲು ಸಾಕಷ್ಟು ವರ್ಷ ಬೇಕಾಗಲಿದೆ. ಟ್ರಯಲ್‌ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ. ಆದ್ದರಿಂದ ಜಾಮೀನು ಮಂಜೂರು ಮಾಡಿ ಎಂದು ಏಪ್ರಿಲ್ 2ನೇ ವಾರದಲ್ಲಿ ಮನವಿ ಮಾಡಿದ್ದಾರೆ.

ಟ್ರಯಲ್ ಪ್ರಾರಂಭವಾಗಿ 8 ತಿಂಗಳಿಗೆ 15 ಸಾಕ್ಷಿಗಳಷ್ಟೇ ವಿಚಾರಣೆಯಾಗಿದೆ. ಪ್ರಕರಣದಲ್ಲಿ 273 ಸಾಕ್ಷ್ಯಗಳು ಇದ್ದಾವೆ. ಟ್ರಯಲ್ ಕೋರ್ಟ್‌ನಲ್ಲಿ ರೇಣುಕಾಸ್ವಾಮಿ ತಂದೆ – ತಾಯಿ ಹೊರತು ಪಡಿಸಿದರೆ, ಮಹಜರು ಸಾಕ್ಷಿಗಳ ವಿಚಾರಣೆ ಮಾತ್ರ ನಡೆಯುತ್ತಿದೆ. ಆರೋಪಿಗಳು ಟ್ರಯಲ್ ಸಂದರ್ಭದಲ್ಲಿ ಬೇರೆ ಬೇರೆ ಅರ್ಜಿಗಳ ಸಲ್ಲಿಕೆ ಮಾಡಿದ್ದು, ತುಂಬಾ ವಿಳಂಬಕ್ಕೆ ಕಾರಣವಾಗಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.14 ರಂದು ಜಾಮೀನು ರದ್ದು ಮಾಡಿದ್ದ ಸುಪ್ರೀಂ ಕೋರ್ಟ್, ಆರೋಪಿಗಳಿಗೆ ತಕ್ಷಣವೇ ಶರಣಾಗಲು ಸೂಚಿಸಿತ್ತು. ಆದೇಶದ ಬಳಿಕ ಜೈಲು ಸೇರಿದ್ದ ದರ್ಶನ್, ಇದೀಗ ಮಧ್ಯಂತರ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ.