ಉಡುಪಿ : ನಗರದಲ್ಲಿ ರಾತ್ರಿ ವೇಳೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಇದರಿಂದ ವಾಹನ ಸವಾರರು ತೀರಾ ತೊಂದರೆ ಅನುಭವಿಸುವಂತಾಯಿತು. ಮಳೆಯಿಂದಾಗಿ ನಗರದ ಹಲವು ಮಾರ್ಗಗಳಲ್ಲಿ ಟ್ರಾಫಿಕ್ ಜಾಮ್ ಕೂಡ ಕಂಡುಬಂತು. ಕಳೆದ ಐದು ದಿನಗಳಿಂದ ಭಾರೀ ಸೆಕೆಯಿಂದ ಬಳಲುತ್ತಿದ್ದ ಜನತೆಗೆ ಮಳೆಯಿಂದಾಗಿ ತಂಪಿನ ವಾತಾವರಣ ಸೃಷ್ಠಿಯಾಗಿದೆ.
ಕಾರ್ಕಳ ತಾಲೂಕಿನಲ್ಲಿ ಸಂಜೆ ವೇಳೆ ಭಾರೀ ಗಾಳಿ ಮಳೆಯಾಗಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ನೂರಲ್ಬೆಟ್ಟು, ಈದು, ಹೊಸ್ಮಾರು, ರೆಂಜಾಳ, ನೆಲ್ಲಿಕಾರು, ಇರ್ವತ್ತೂರು, ಮುಡಾರು, ಕೆರುವಾಶೆ, ಶಿರ್ಲಾಲು ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ತೀವ್ರವಾಗಿದ್ದು, ಕೆಲವೆಡೆ ಆಲಿಕಲ್ಲು ಮಳೆಯೂ ಆಗಿರುವುದಾಗಿ ತಿಳಿದುಬಂದಿದೆ.
ಬೆಳಗ್ಗಿನಿಂದ ಮೋಡ ಕವಿದು ಉಷ್ಣತೆ ಹೆಚ್ಚಾಗಿದ್ದ ಬಳಿಕ ಸಂಜೆ ಸುರಿದ ಈ ಭಾರೀ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಭಾರೀ ಗಾಳಿಯ ಪರಿಣಾಮ ಕೆಲವು ಕಡೆಗಳಲ್ಲಿ ಮರಗಳು ಧರೆಗೆ ಉರುಳಿ ಬಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸ್ಥಳೀಯರು ಮತ್ತು ಅಧಿಕಾರಿಗಳು ಸೇರಿ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದೇ ರೀತಿ ಹೆಬ್ರಿ ತಾಲೂಕಿನ ಮುನಿಯಾಲು, ವರಂಗ, ಅಂಡಾರು ಹಾಗೂ ಕಬ್ಬಿನಾಲೆ ಪ್ರದೇಶಗಳಲ್ಲಿಯೂ ಮಳೆಯಾದ ಬಗ್ಗೆ ವರದಿಯಾಗಿದೆ.
ಕಾಪು ತಾಲೂಕಿನ ಕಾಪು, ಪಡುಬಿದ್ರಿ, ಹೆಜಮಾಡಿ ಭಾಗಗಳಲ್ಲಿಯೂ ರಾತ್ರಿ ವೇಳೆ ಶನಿವಾರ ಗುಡುಗು ಸಹಿತ ಮಳೆಯಾಗಿದೆ. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಸಂಜೆ ವೇಳೆಗೆ ಮಳೆ ಆರಂಭವಾಗಿ ಸಿಡಿಲು, ಮಿಂಚು ಸಹಿತ ಮಳೆಯ ತೀವ್ರತೆ ಹೆಚ್ಚಾಯಿತು.ಈ ಹಿನ್ನೆಲೆಯಲ್ಲಿ ಕೆಲವಡೆ ವಿದ್ಯುತ್ ವ್ಯತ್ಯಯ ಉಂಟಾಗಿ ಸ್ಥಳೀಯರಿಗೆ ತೊಂದರೆ ಉಂಟಾಯಿತು.
ಅದೇ ರೀತಿ ಕುಂದಾಪುರ, ಬ್ರಹ್ಮಾವರ, ಬೈಂದೂರು ತಾಲೂಕಿನಲ್ಲೂ ಉತ್ತಮ ಮಳೆಯಾಗಿದೆ. ಗುಡುಗು ಸಹಿತ ಭಾರೀ ಮಳೆಯಿಂದಾಗಿ ಜನ ಆತಂಕಕ್ಕೆ ಒಳಗಾಗಿದ್ದಾರೆ. ಮಳೆಯ ಪರಿಣಾಮವಾಗಿ ಕೆಲವು ಕಡೆ ಕೃಷಿ ಭೂಮಿಗಳಿಗೆ ತಾತ್ಕಾಲಿಕ ಹಾನಿ ಉಂಟಾಗಿರುವ ಸಾಧ್ಯತೆ ಇದ್ದು, ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

