ಉಡುಪಿ: ಯೇಸು ಕ್ರಿಸ್ತರು ಜೆರುಸಲೇಂ ನಗರ ಪ್ರವೇಶಿಸಿದ ಸಂಕೇತವಾಗಿ ‘ಗರಿಗಳ ಭಾನುವಾರ ಹಬ್ಬ’ ಎಂದೇ ಪ್ರಸಿದ್ಧಿ ಪಡೆದಿರುವ ‘ಪಾಮ್ ಸಂಡೆ’ಯನ್ನು ಜಿಲ್ಲಾದ್ಯಂತ ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತೀ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಕಲ್ಯಾಣಪುರ ಮಿಲಾಗ್ರಿಸ್ ಪ್ರಧಾನ ದೇವಾಲಯದಲ್ಲಿ ನಡೆದ ಪಾಮ್ ಸಂಡೆ ಧಾರ್ಮಿಕ ವಿಧಿವಿಧಾನದಲ್ಲಿ ಭಾಗವಹಿಸಿ ಸಂದೇಶ ನೀಡಿದರು.

ಚರ್ಚಿನ ಪ್ರಧಾನ ಧರ್ಮಗುರು ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ|ಪ್ರದೀಪ್ ಕಾರ್ಡೊಜಾ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಕ್ರೈಸ್ತರು ಬೆಳಗ್ಗಿನ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡು ತೆಂಗಿನ ಗರಿಗಳನ್ನು ಹಿಡಿದು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗುವ ಮೂಲಕ ಯೇಸುವಿನ ಸ್ಮರಣೆ ಮಾಡಿದರು. ಚರ್ಚುಗಳಲ್ಲಿ ಯೇಸುವಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಬಲಿಪೂಜೆಯನ್ನು ನೆರವೇರಿಸಲಾಯಿತು.

ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಪಾಮ್ ಸಂಡೆಯ ಪ್ರಯುಕ್ತ ವಿಶೇಷ ಪೂಜೆಗಳು ಜರುಗಿದವು. ಉಡುಪಿ ಶೋಕಮಾತಾ ದೇವಾಲಯದಲ್ಲಿ ವಂ|ಚಾರ್ಲ್ಸ್ ಮಿನೇಜಸ್, ಶಿರ್ವ ಆರೋಗ್ಯ ಮಾತಾ ಚರ್ಚಿನಲ್ಲಿ ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಉಡುಪಿ ಧರ್ಮಪ್ರಾಂತ್ಯದ ನಿಯೋಜಿತ ಧರ್ಮಾಧ್ಯಕ್ಷರಾದ ಶ್ರೇಷ್ಠಗುರು ವಂ|ಡಾ|ಲೆಸ್ಲಿ ಸಿ ಡಿಸೋಜಾ, ತೊಟ್ಟಂ ಸಂತ ಅನ್ನಮ್ಮ ದೇವಾಲಯಲ್ಲಿ ಧರ್ಮಗುರು ಡೆನಿಸ್ ಡೆಸಾ, ಸಾಸ್ತಾನ ಚರ್ಚಿನಲ್ಲಿ ವಂ|ಸುನೀಲ್ ಡಿಸಿಲ್ವಾ, ಉಪಸ್ಥಿತಿಯಲ್ಲಿ ಪಾಮ್ ಸಂಡೆಯ ಧಾರ್ಮಿಕ ವಿಧಿಗಳು ಜರುಗಿದವು. ಜಿಲ್ಲೆಯ ಎಲ್ಲ ಚರ್ಚ್ಗಳಲ್ಲಿ ಶ್ರದ್ಧಾಭಕ್ತಿಯಿಂದ ಆಯಾ ಚರ್ಚಿನ ಧರ್ಮಗುರುಗಳ ನೇತೃತ್ವದಲ್ಲಿ ಪಾಮ್ ಸಂಡೆ ಜರುಗಿತು.

ಪಾಮ್ ಸಂಡೆ ಆಚರಣೆಯೊಂದಿಗೆ ‘ಕ್ರೈಸ್ತರ ಪವಿತ್ರ ಸಪ್ತಾಹ’ ಆರಂಭಗೊಳ್ಳುತ್ತದೆ. ಪವಿತ್ರ ಸಪ್ತಾಹವು ಕ್ರೈಸ್ತರಿಗೆ ಮಹತ್ವದಾಗಿದ್ದು, ಈ ಸಪ್ತಾಹದ ಗುರುವಾರ ತನ್ನ ಶಿಷ್ಯರೊಂದಿಗೆ ಯೇಸುವಿನ ಕೊನೆಯ ಭೋಜನ ಹಾಗೂ ಶಿಷ್ಯರ ಪಾದಗಳನ್ನು ತೊಳೆದ ದಿನವನ್ನು ನೆನೆದರೆ, ಶುಕ್ರವಾರ ಯೇಸುಕ್ರಿಸ್ತರ ಮರಣದ ದಿನವಾದ ‘ಗುಡ್ ಫ್ರೈಡೆ’ ಆಚರಿಸಲಾಗುತ್ತದೆ. ಅಂದು ಇಡೀ ದಿನ ಉಪವಾಸ ಮತ್ತು ಧ್ಯಾನದಲ್ಲಿ ಕ್ರೈಸ್ತರು ತಮ್ಮ ದಿನವನ್ನು ಕಳೆಯುತ್ತಾರೆ. ಶನಿವಾರ ಈಸ್ಟರ್ ಜಾಗರಣೆ ಮತ್ತು ಭಾನುವಾರ ಯೇಸುಕ್ರಿಸ್ತರ ಪುನರುತ್ಥಾನದ ಪ್ರಯುಕ್ತ ‘ಈಸ್ಟರ್ ಹಬ್ಬ’ ಆಚರಿಸಲಾಗುತ್ತದೆ.

ಏನಿದು ‘ಪಾಮ್ ಸಂಡೇ’?

ಯೇಸು ಕ್ರಿಸ್ತರು ಜೆರುಸಲೇಂ ನಗರವನ್ನು ಪ್ರವೇಶಿಸಿದಾಗ ಅಲ್ಲಿನ ಭಕ್ತರು ಒಲಿವ್ ಮರದ ಗರಿಗಳನ್ನು ಹಿಡಿದು ಯೇಸುವಿಗೆ ವೈಭವದಿಂದ ಸ್ವಾಗತಿಸಿದ ಸಂಕೇತವಾಗಿ ಜಗತ್ತಿನಾದ್ಯಂತ ಪಾಮ್ ಸಂಡೆ ಆಚರಿಸಲಾಗುತ್ತದೆ. ಕರಾವಳಿಯಲ್ಲಿ ಧರ್ಮಗುರುಗಳಿಂದ ಆಶೀರ್ವದಿಸಲ್ಪಟ್ಟ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಮೆರವಣಿಗೆಯಲ್ಲಿ ತೆರಳಿ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

View this post on Instagram

A post shared by News Karnataka (@newskarnataka)