ಉಡುಪಿ: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ನಡೆಯುತ್ತಿದ್ದ 432 ದಿನಗಳ ಹೋರಾಟಕ್ಕೆ ಕೊನೆಗೂ ಸರ್ಕಾರ ಸ್ಪಂದಿಸಿದೆ. ಪಟ್ಟಣ ಪಂಚಾಯತ್‌ನ 20 ವಾರ್ಡ್‌ಗಳ ಪೈಕಿ ಐದು ವಾರ್ಡ್‌ಗಳನ್ನು ಕೈಬಿಟ್ಟು ನೂತನ ಪಟ್ಟಣ ಪಂಚಾಯತ್ ರಚಿಸುವುದಾಗಿ ಪೌರಾಡಳಿತ ಸಚಿವ ಎಚ್‌.ಸಿ. ಬಾಲಕೃಷ್ಣ ಭರವಸೆ ನೀಡಿದ್ದಾರ

ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮೀಣ ಪ್ರದೇಶಗಳನ್ನು ಅವೈಜ್ಞಾನಿಕವಾಗಿ ಸೇರ್ಪಡೆಗೊಳಿಸಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ, ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ರೈತರು ಒಂದು ವರ್ಷಕ್ಕೂ ಅಧಿಕ ಕಾಲದಿಂದ ಧರಣಿ ನಡೆಸುತ್ತಿದ್ದರು. ರೈತರ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರದ ಪರವಾಗಿ ಸಚಿವ ಎಚ್‌.ಸಿ. ಬಾಲಕೃಷ್ಣ ಅವರು ತಾಲೂಕು ಆಡಳಿತ ಸೌಧದ ಎದುರು ಧರಣಿ ನಡೆಸುತ್ತಿದ್ದ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಬೈಂದೂರಿಗೆ ಆಗಮಿಸಿದ ಸಚಿವರು, ರೈತರ ಬೇಡಿಕೆ ನ್ಯಾಯಯುತವಾಗಿದೆ. ಬೈಂದೂರು ಪಟ್ಟಣ ಪಂಚಾಯತ್ ರಚನೆಯಲ್ಲಿನ ಅವೈಜ್ಞಾನಿಕತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.

ಭರವಸೆ ಈಡೇರದಿದ್ದರೆ ರಾಜೀನಾಮೆ:
‘ರೈತರನ್ನು ಸಮಾಧಾನಪಡಿಸಲು ಈ ಮಾತು ಹೇಳುತ್ತಿಲ್ಲ. ಮುಖ್ಯಮಂತ್ರಿಗಳ ಪರವಾಗಿ ಸರ್ಕಾರದ ಅಧಿಕೃತ ಘೋಷಣೆ ಮಾಡುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದ ಸಚಿವರು, ಆದೇಶ ಹೊರಡಿಸಲು ಒಂದೆರಡು ದಿನಗಳು ಬೇಕಾಗಬಹುದು. ಘೋಷಣೆಯ ಸಂಪೂರ್ಣ ಅನುಷ್ಠಾನಕ್ಕೆ ಒಂದರಿಂದ ಎರಡು ತಿಂಗಳ ಕಾಲಾವಕಾಶ ಅಗತ್ಯವಿದೆ ಎಂದರು.

ತಾವು ನೀಡಿರುವ ಭರವಸೆಯನ್ನು ಈಡೇರಿಸಲು ಬದ್ಧವಾಗಿದ್ದು, ಒಂದು ವೇಳೆ ಅದನ್ನು ಈಡೇರಿಸಲು ಸಾಧ್ಯವಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರೊಂದಿಗೆ ನಿಲ್ಲುವುದಾಗಿ ಘೋಷಿಸಿದರು. ಸಚಿವರ ಈ ಹೇಳಿಕೆ ಹೋರಾಟಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.

432 ದಿನಗಳ ಸುದೀರ್ಘ ಹೋರಾಟಕ್ಕೆ ಸರ್ಕಾರದಿಂದ ಸ್ಪಂದನೆ ದೊರೆತಿರುವುದು ರೈತರಲ್ಲಿ ಸಮಾಧಾನ ಮೂಡಿಸಿದೆ. ಪಕ್ಷಾತೀತವಾಗಿ ರೈತರ ಬೇಡಿಕೆಯನ್ನು ಪರಿಗಣಿಸಿರುವುದು ಹೋರಾಟಕ್ಕೆ ಮಹತ್ವದ ತಿರುವು ನೀಡಿದೆ. ಆದರೆ, ಸರ್ಕಾರದ ಘೋಷಣೆ ಅಧಿಕೃತ ಆದೇಶವಾಗಿ ಹೊರಬಂದು ಅನುಷ್ಠಾನಗೊಳ್ಳುವುದನ್ನೇ ರೈತರು ಎದುರು ನೋಡುತ್ತಿದ್ದಾರೆ.

ಭರವಸೆಯಷ್ಟೇ ಗೆಲುವಲ್ಲ; ಅಧಿಕೃತ ಆದೇಶ ಜಾರಿಯಾದಾಗಲೇ ಹೋರಾಟಕ್ಕೆ ಪೂರ್ಣ ಜಯ ಸಿಗಲಿದೆ. ಬೈಂದೂರಿನ ಗ್ರಾಮೀಣ ಭಾಗದ ರೈತರ ದೀರ್ಘ ಹೋರಾಟದ ಬೇಡಿಕೆ ಈಡೇರುವುದೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.