ಉಡುಪಿ: ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಮಹತ್ವಾಕಾಂಕ್ಷಿ ಯೋಜನೆ ವಯೋವಂದನ ಆತಿಥ್ಯ ಗೃಹ ಇದರ ಕಟ್ಟಡದ ಭೂಮಿ ಪೂಜೆ ಮತ್ತು ಶಿಲನ್ಯಾಸ ಕಾರ್ಯಕ್ರಮವು ಪರಮಪೂಜ್ಯ ಶ್ರೀ ಕಾಶೀ ಮಠಾಧೀಶರಾದ ಶ್ರೀ ಶ್ರೀ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ನಕ್ಷತ್ರ (ಸ್ವಾತಿ ನಕ್ಷತ್ರ)ದಂದು ಫೆಬ್ರವರಿ 8 ಆದಿತ್ಯವಾರದಂದು ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ಜರುಗಲಿರುವುದು.
ಕಳೆದ 14 ವರ್ಷಗಳಿಂದ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿರುವ ಜಿಎಸ್ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಮಹತ್ವಕಾಂಕ್ಷಿ ಯೋಜನೆಗೆ ಅಡಿ ಕಲ್ಲು ಬೀಳಲಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಆರ್ಥಿಕವಾಗಿ ತೀರ ಸಂಕಷ್ಟದ ಸ್ಥಿತಿಯಲ್ಲಿರುವ ಕುಟುಂಬಗಳಿಗೆ ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗಳಿಗೆ ₹1,000/-ದಿಂದ ಅವರ ಸ್ಥಿತಿಗತಿಗೆ ಅನುಗುಣವಾಗಿ ₹2,500 ರಿ ವರೆಗೆ ಸುಮಾರು 192 ಕುಟುಂಬಗಳಿಗೆ ಕುಟುಂಬ ಚೈತನ್ಯ ನಿಧಿ ನಿಯಮಿತವಾಗಿ ತಲುಪುತ್ತಿದ್ದು, ಕಳೆದ ವರ್ಷ ಯೋಜನೆಯ ದಶಮಾನೋತ್ಸವ ಸಂದರ್ಭದಲ್ಲಿ ಪ್ರತಿ ಕುಟುಂಬಗಳಿಗೆ ₹12,೦೦೦/- ಆಪದ್ದನವನ್ನು ನೀಡಲು ಮನೆ ಮನೆ ಭೇಟಿ ನೀಡಿದಾಗ, ಸುಮಾರು 16 ಕುಟುಂಬಗಳು ಸ್ವಂತ ಮನೆ ಅಥವಾ ಬಾಡಿಗೆ ಮನೆಯಲ್ಲಿ ಇರಲಾರದ ಸ್ಥಿತಿಯಲ್ಲಿ ಬೇರೆಯವರ ಆಶ್ರಯದಲ್ಲಿ ಇರುವ ದುಸ್ತಿತಿ ಬಹಳ ವೇದನೆ ತಂದಿತು.
ಇಂತಹ ಸಂಕಷ್ಟಮಯ ಪರಿಸ್ಥಿತಿಯಿಂದ ಕುಟುಂಬಗಳನ್ನು ಹೊರತಂದು ಗೌರವಯುತ ಬಾಳ್ವೆಯನ್ನು ನಡೆಸಲು ಅನುಕೂಲವಾಗುವಂತೆ “ವಯೋ ವಂದನ ಆತಿಥ್ಯ ಗೃಹ ಯೋಜನೆ “ಯ ಚಿಂತನೆ ಮೂಡಿಬಂತು ಮತ್ತು ಇದೀಗ ಅದು ಕಾರ್ಯರೂಪಕ್ಕೆ ಬರುತ್ತಿದೆ.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಖರೀದಿಸಿದ 1.11 ಎಕ್ರೆ ಜಾಗದಲ್ಲಿ ಒಟ್ಟು ಸುಮಾರು ಐವತ್ತು ಸಾವಿರ ಚದರಡಿ ನಿರ್ಮಾಣದ ಕಟ್ಟಡದ ತಳ ಅಂತಸ್ತಿನಲ್ಲಿ ಅಡುಗೆ ಕೋಣೆ, ಡೈನಿಂಗ್ ಹಾಲ್, ದೇವರ ಕೋಣೆ , ಪ್ರಾರ್ಥನಾ ಸಭಾ ಗ್ರಹ, ಪಾರ್ಕಿಂಗ್, ಭದ್ರತಾ ಕೊಠಡಿ, ನಡಿಗೆ ಪಥ, ಲಾಂಡ್ರಿ, ಮುಂತಾದ ಮೂಲಭೂತ ಅವಶ್ಯಕತೆಗಳ ಜೊತೆಗೆ ನೆಲಅಂತಸ್ತು ಮತ್ತು ಮೇಲಿನ ಎರಡು ಮಹಡಿಗಳಲ್ಲಿ 275 ಚದರಡಿಯ ತಲಾ 24ರಂತೆ ಒಟ್ಟು 72 ಸನಿವಾಸ ಕೊಠಡಿಗಳ ನಿರ್ಮಾಣವಾಗುತ್ತದೆ.
ನಿಯಮಿತ ಆರೋಗ್ಯ ತಪಾಸಣೆ, ತುರ್ತು ವೈದ್ಯಕೀಯ ಸೌಲಭ್ಯ, ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆ, ನಿವಾಸಿಗಳ ಜೀವನೋತ್ಸಾಹ ಹೆಚ್ಚಿಸಿ ಗೌರವಯುತವಾದ ಕ್ರಿಯಾಶೀಲ ಬದುಕಿಗೆ ವೈವಿಧ್ಯಮಯ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ.
ಯೋಜನೆಯ ಈ ಕಟ್ಟಡದಲ್ಲಿ ಮಕ್ಕಳಿಲ್ಲದಿರುವ ಮತ್ತು ಆರೈಕೆ ಮಾಡಲು ಯಾರೂ ಇಲ್ಲದಿರುವ ಆರ್ಥಿಕವಾಗಿ ದುರ್ಬಲ ಜಿಎಸ್ಬಿ ಸಮಾಜದ ಹಿರಿಯರಿಗೆ ಪ್ರಥಮ ಆದ್ಯತೆಯಲ್ಲಿ ಈ ಯೋಜನೆಯಡಿಯಲ್ಲಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ವಾಸ್ತವ್ಯ ಒದಗಿಸಲಾಗುವುದು. ಆರ್ಥಿಕವಾಗಿ ಸದೃಢರಾಗಿದ್ದು ಮಕ್ಕಳಿಲ್ಲದ ಹಿರಿಯರಿಗೆ ಅಗತ್ಯ ಶುಲ್ಕಗಳೊಂದಿಗೆ ಪ್ರವೇಶ ಕಲ್ಪಿಸುವ ವಿವಿಧ ಆಯ್ಕೆಗಳು ಲಭ್ಯವಿದೆ.
ಮಕ್ಕಳು ವಿದೇಶ ಅಥವಾ ದೂರದ ಸ್ಥಳಗಳಿಗೆ ತೆರಳಬೇಕಾದ ಸಂದರ್ಭಗಳಲ್ಲಿ ತಂದೆ ಅಥವಾ ತಾಯಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಸಾಧ್ಯವಾಗದ ಅನಿವಾರ್ಯ ಪರಿಸ್ಥಿತಿಯಲ್ಲಿ ನಿಗದಿತ ಶುಲ್ಕದೊಂದಿಗೆ ತಾತ್ಕಾಲಿಕ ಆಶ್ರಯವನ್ನು ಒದಗಿಸುವುದು ಈ ಯೋಜನೆಯ ಸಾಮಾಜಿಕ ಬದ್ಧತೆ ಎಂದು ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಆರ್ . ವಿವೇಕಾನಂದ ಶೆಣೈ, ಅಧ್ಯಕ್ಷ ಜಿ .ಸತೀಶ್ ಹೆಗ್ಡೆ, ಕೋಟ ಮತ್ತು ಪ್ರಧಾನ ಕಾರ್ಯದರ್ಶಿ, ಸಾಣೂರು ನರಸಿಂಹ ಕಾಮತ್ ಅವರು ತಿಳಿಸಿರುತ್ತಾರೆ.
ಮೇಲ್ನೋಟಕ್ಕೆ ಜಿ.ಎಸ್.ಬಿ. ಕುಟುಂಬಗಳು ಅನುಕೂಲಸ್ಥರಂತೆ ತೋರುತ್ತದೆ. ಆದರೆ ಸಮಾಜದ ಕುಟುಂಬಗಳ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಜಿ.ಎಸ್.ಬಿ. ಕುಟುಂಬಗಳು ತೀರಾ ಕಷ್ಟದಲ್ಲಿವೆ. ಆಕಸ್ಮಿಕ ಘಟನೆಗಳಿಂದ ತೊಂದರೆಗೀಡಾದ ಕೆಲವು ಕುಟುಂಬಗಳು ಒಂದುಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿವೆ. ಪ್ರತಿಭಾವಂತರು ಬಡತನದಿಂದಾಗಿ ಶಿಕ್ಷಣ ವಂಚಿತರಾಗುತ್ತಿದ್ದಾರೆ. ಇಂತಹ ಕುಟುಂಬಗಳಿಗೆ ಸಹಾಯ ಹಸ್ತ ನೀಡುವುದೇ ಈ ವೇದಿಕೆಯ ಪ್ರಮುಖ ಆದ್ಯತೆಯಾಗಿದೆ.
-ಆರ್. ವಿವೇಕಾನಂದ ಶೆಣೈ, ಕಾರ್ಕಳ, ಸಂಚಾಲಕರು
ಜಿ.ಎಸ್.ಬಿ. ಸಮಾಜದಲ್ಲಿ ಬಹಳಷ್ಟು ದಾನಿಗಳಿದ್ದಾರೆ. ಆದರೆ ಹೆಚ್ಚಿನವರಿಗೆ ಅದಕ್ಕೆ ಸೂಕ್ತ ಅವಕಾಶ ಸಿಗಲಿಲ್ಲ. ಈ ನಿಟ್ಟಿನಲ್ಲಿ
ನಾವು ಸ್ಥಿತಿವಂತರು ಮತ್ತು ಬಡಜನರ ಮಧ್ಯೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ.
-ಜಿ. ಸತೀಶ್ ಹೆಗ್ಡೆ, ಕೋಟ ಅಧ್ಯಕ್ಷರು
ವೇದಿಕೆಗೆ ದಾನಿಗಳು ನೀಡುವ ಕೊಡುಗೆಯನ್ನು ಯಾವ ರೀತಿಯಲ್ಲಿ ಉಪಯೋಗಿಸಲಾಗಿದೆ ಎಂಬ ವಿವರಗಳನ್ನು ಪಾರದರ್ಶಕವಾಗಿರಿಸಿ ಪೂರ್ತಿ ವಿವರಗಳನ್ನು ಸಂಬಂಧಪಟ್ಟ ದಾನಿಗಳಿಗೆ ಕಳುಹಿಸಲಾಗುವುದು.
ಇದರಿಂದಾಗಿ ಸಮಾಜಬಂಧುಗಳಿಗೆ ಸಂಘಟನೆ ಬಗ್ಗೆ ವಿಶ್ವಾಸ ಹೆಚ್ಚಿ ಇನ್ನೂ ಹೆಚ್ಚಿನ ಕೊಡುಗೆ ಬರಲು ಸಾಧ್ಯವಾಗುತ್ತದೆ. ಸಮಾಜ ಸಂಘಟನೆಗಳು ತಮ್ಮ ಪ್ರತಿಷ್ಠೆಗಾಗಿ ಜನರ ಮಧ್ಯೆ ದ್ವೀಪವಾಗದೆ.. ನಿತ್ಯ ನಿರಂತರ ಸಂಪರ್ಕ ಸೇತುವೆಯಾಗಬೇಕು ಎಂಬುದೇ ನಮ್ಮ ಸಂಘಟನೆಯ ಮೂಲ ಉದ್ದೇಶ ಮತ್ತು ಕಾರ್ಯ ಶೈಲಿ.
-ಸಾಣೂರು ನರಸಿಂಹ ಕಾಮತ್, ಪ್ರಧಾನ ಕಾರ್ಯದರ್ಶಿ.

