ಉಡುಪಿ: ರಾಜ್ಯದಲ್ಲಿ ಪವರ್ ಶೇರಿಂಗ್ ವಿವಾದ ವಿಚಾರವಾಗಿ ಮಾಜಿ ಸಿಎಂ ಎಂ ವೀರಪ್ಪ ಮೊಯ್ಲಿ ಹೇಳಿಕೆ ನೀಡಿದರು. ಜನರಿಗೆ ಒಳ್ಳೆಯ ಸರಕಾರ ಬೇಕು. ಭ್ರಷ್ಟಾಚಾರ ರಹಿತ ಸದೃಢ ಸರಕಾರ ಬೇಕು. ಗ್ಯಾರಂಟಿ ಕಾರ್ಯಕ್ರಮಗಳಿಂದ ಬಡವರಿಗೆ ಅನುಕೂಲವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರ ಹಸಿವು ಮುಕ್ತ ಮಾಡಿದೆ ಎಂದರು.
ಸರಕಾರ ಸುಭದ್ರವಾಗಿ ಇರಬೇಕು. ಇದು ಸಾರ್ವಜನಿಕರ, ಕಾರ್ಯಕರ್ತರ ಅಭಿಲಾಷೆಯಾಗಿದೆ. ಸುಭದ್ರ ಸರಕಾರ ನೀಡಲು ಸರಕಾರ ಪ್ರಯತ್ನ ಮಾಡಬೇಕು. ಪವರ್ ಶೇರಿಂಗ್ ಸಾರ್ವಜನಿಕ ಚರ್ಚೆಯ ವಸ್ತು ಆಗಬಾರದು. ನಾನು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡ ಬಯಸುತ್ತೇನೆ. ಅನಿವಾರ್ಯತೆ ಅವಶ್ಯಕತೆ ಇದ್ದರೆ ಹೈಕಮಾಂಡ್ ತೀರ್ಮಾನ ಮಾಡಬೇಕೆ ಹೊರತು ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಇದರಿಂದ ಜನರಲ್ಲಿ ಅಭದ್ರತೆ ಬರುತ್ತದೆ. ಸಿದ್ದರಾಮಯ್ಯ ಮತ್ತು ಡಿಸಿಎಂ ನಡುವೆ ಗೊಂದಲ ವಿಚಾರವಾಗಿ ಮಾತನಾಡಿ, ಏನೇ ಕೋಪವಿದ್ದರೂ ಕ್ಯಾಬಿನೆಟ್ ನಿರಾತಂಕವಾಗಿ ನಡೆಯುತ್ತಿದೆ. ಸರ್ಕಾರದ ಕಾರ್ಯಕ್ರಮಗಳು ನಿರಾತಂಕವಾಗಿ ಅನುಷ್ಠಾನ ಆಗುತ್ತಿವೆ. ನಮಗೆ ಬೇಕಾಗಿರುವುದು ಅಷ್ಟೇ. ಅವರು ಪರಸ್ಪರ ಅಪ್ಪಿಕೊಳ್ಳಲಿ ಅಥವಾ ಮುನಿಸಿಕೊಳ್ಳಲಿ. ಜನರಿಗೆ ಬೇಕಾದದ್ದು ಉತ್ತಮ ಆಡಳಿತ. ವಾರ ವಾರ ಕ್ಯಾಬಿನೆಟ್ ಮೀಟಿಂಗ್ ನಡೆಯುತ್ತಿದೆ.
ಬಿಕ್ಕಟ್ಟು ಇದ್ದರೆ ವಾರ ವಾರ ಕ್ಯಾಬಿನೆಟ್ ಮೀಟಿಂಗ್ ಹೇಗೆ ನಡೆಯುತ್ತದೆ. ಮಂತ್ರಿಗಳಾಗಬೇಕು ಎಂದು ಹಂಬಲಿಸುವವರು ಇರುತ್ತಾರೆ. ಮುಖ್ಯಮಂತ್ರಿ ಆಗಬೇಕು ಎಂದು ಹಂಬಲಿಸುವುದು ತಪ್ಪಲ್ಲ. ಆದರೆ ಅದು ಸಾರ್ವಜನಿಕ ಚರ್ಚೆಯ ವಸ್ತು ಆಗಲೇಬಾರದು ಎಂದರು.
ಮಹದೇವಪ್ಪ ದಲಿತ ಸಿಎಂ ಚರ್ಚೆ ವಿಚಾರವಾಗಿ ಯಾವುದೇ ಕಾರಣಕ್ಕೂ ಈ ಚರ್ಚೆ ಸಾರ್ವಜನಿಕವಾಗಿ ಬರಬಾರದು. ನಾನೊಬ್ಬ ಪಕ್ಷದಲ್ಲಿ ಹಿರಿಯನಾಗಿ ಸಲಹೆ ನೀಡುತ್ತೇನೆ. 30 ಶಾಸಕರು ಸಚಿವರಾಗುವ ಇಚ್ಚೆ ವ್ಯಕ್ತಪಡಿಸಿರುವ ವಿಚಾರವಾಗಿ ಮಾತನಾಡಿ, ಕ್ಯಾಬಿನೆಟ್ ನಲ್ಲಿ ಕೆಲವರು ಮಾತ್ರ ಇರಲು ಸಾಧ್ಯ. ಒಬ್ಬರು ಮಾತ್ರ ಮುಖ್ಯಮಂತ್ರಿ ಆಗಲು ಸಾಧ್ಯ. ಅನಗತ್ಯ ಚರ್ಚೆಯ ವಿಷಯ ಆಗಬಾರದು ಎಂದರು.

