ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ಮತ್ತು ಧರ್ಮಪ್ರಾಂತ್ಯದ ಬೈಬಲ್ ಆಯೋಗದ ಸಹಯೋಗದೊಂದಿಗೆ, ಕುಲಶೇಕರದ ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್ ಮೈದಾನದಲ್ಲಿ ಫೆಬ್ರವರಿ 26 ರಿಂದ ಮಾರ್ಚ್ 01, 2026 ರವರೆಗೆ ನಾಲ್ಕು ದಿನಗಳ ಕಾಲ ‘ಬೃಹತ್ ಬೈಬಲ್ ಅಧಿವೇಶನ 2026’ ಅನ್ನು ಆಯೋಜಿಸಲಾಗಿದೆ. ಈ ಆಧ್ಯಾತ್ಮಿಕ ಕಾರ್ಯಕ್ರಮವು ಪ್ರತಿದಿನ ಸಂಜೆ 4:00 ರಿಂದ 8:30 ರವರೆಗೆ ನಡೆಯಲಿದೆ.

ಆಯೋಜಕರ ಪರವಾಗಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಅವರು, “2026ನೇ ಸಾಲಿನ ‘ದೇವರ ವಾಕ್ಯದ ಭಾನುವಾರ’ದ ಆಚರಣೆಗಾಗಿ ಪರಮಪೂಜ್ಯ ಪೋಪ್ ಹದಿನಾಲ್ಕನೇ ಲಿಯೋ ಅವರು ನೀಡಿದ ‘ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ನೆಲಸಿದೆ’ (ಕೊಲೊಸ್ಸೆಯರಿಗೆ ಬರೆದ ಪತ್ರ 3:16) ಎಂಬ ಧ್ಯೇಯವಾಕ್ಯದಿಂದ ಈ ಅಧಿವೇಶನವು ಪ್ರೇರಿತವಾಗಿದೆ” ಎಂದು ತಿಳಿಸಿದರು.

ಜನರ ದೈನಂದಿನ ಹೋರಾಟ, ಸುಖ-ದುಃಖಗಳಲ್ಲಿ ದೇವರ ಸಾನ್ನಿಧ್ಯವನ್ನು ಅನುಭವಿಸಲು ಮತ್ತು ಬೈಬಲ್ ವಾಕ್ಯಗಳ ಶಕ್ತಿಯನ್ನು ಆಚರಿಸುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಇದೊಂದು ‘ಬೈಬಲ್ ಹಬ್ಬ’ವಾಗಿದ್ದು, ವಿಶ್ವಾಸಿಗಳು ದೇವರಿಗೆ ಪ್ರಿಯವಾದ ಜೀವನವನ್ನು ರೂಪಿಸಿಕೊಳ್ಳಲು ಇದು ಮಾರ್ಗದರ್ಶನ ನೀಡಲಿದೆ ಎಂದು ಅವರು ಹೇಳಿದರು.

ಅಧಿವೇಶನದ ಪ್ರಮುಖಾಂಶಗಳು:
ಆಧ್ಯಾತ್ಮಿಕ ವಿಧಿವಿಧಾನಗಳು: ಪ್ರತಿದಿನ ಪವಿತ್ರ ಬಲಿಪೂಜೆ, ಜಪಮಾಲೆ ಧ್ಯಾನ ಮತ್ತು ದಿವ್ಯ ಸತ್ಪ್ರಸಾದದ ಆರಾಧನೆ ನಡೆಯಲಿದೆ.
ಬೈಬಲ್ ತಜ್ಞರಿಂದ ಪ್ರವಚನ: ಎಂಟು ಮಂದಿ ಧರ್ಮಗುರುಗಳು ಬೈಬಲ್ ಆಧಾರಿತ ವಿಷಯಗಳ ಬಗ್ಗೆ ಕೊಂಕಣಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಆಳವಾದ ಪ್ರವಚನ ನೀಡಲಿದ್ದಾರೆ. ನಾಲ್ವರು ಧರ್ಮಗುರುಗಳು ವಿಶೇಷ ಆರಾಧನಾ ವಿಧಿಗಳ ನೇತೃತ್ವ ವಹಿಸಲಿದ್ದಾರೆ.

ಸ್ತುತಿ-ಆರಾಧನೆ ಮತ್ತು ಗುಣಪಡಿಸುವ ಪ್ರಾರ್ಥನೆ: ಸರ್ವಿಸ್ ಕಮ್ಯೂನಿಯನ್‌ನ ಅನುಭವಿ ಮುಂದಾಳುಗಳ ನೇತೃತ್ವದಲ್ಲಿ ಸ್ತುತಿ-ಆರಾಧನೆ ಮತ್ತು ಜನರಿಗಾಗಿ ವಿಶೇಷ ಗುಣಪಡಿಸುವ ಪ್ರಾರ್ಥನೆಗಳು ನಡೆಯಲಿವೆ.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠಗುರುಗಳಾದ ಅತಿ ವಂದನೀಯ ಮ್ಯಾಕ್ಸಿಂ ನೊರೋನ್ಹಾ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ರೊಯ್ ಕಾಸ್ತೆಲಿನೊ, ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್ (ಆಧ್ಯಾತ್ಮಿಕ ನಿರ್ದೇಶಕರು, ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್), ವಂದನೀಯ ಡಾ. ವಿನ್ಸೆಂಟ್ ಸಿಕ್ವೇರಾ (ಕಾರ್ಯದರ್ಶಿಗಳು, ಬೈಬಲ್ ಆಯೋಗ), ಶ್ರೀ ಡೊಲ್ಫಿ ಲೋಬೊ (ಸಂಚಾಲಕರು), ಶ್ರೀ ಎಲಿಯಾಸ್ ಫೆರ್ನಾಂಡಿಸ್ (ಪತ್ರಿಕಾ ಸಂಚಾಲಕರು), ವಂದನೀಯ ರೋಹಿತ್ ಡಿ’ಕೋಸ್ಟಾ (ನಿರ್ದೇಶಕರು, ಮಂಗಳಜ್ಯೋತಿ), ವಂದನೀಯ ಅನಿಲ್ ಫೆರ್ನಾಂಡಿಸ್ (ನಿರ್ದೇಶಕರು, ಕೆನರಾ ಕಮ್ಯುನಿಕೇಶನ್) ಮತ್ತು ಶ್ರೀ ಆಲ್ವಿನ್ ಡಿ’ಸೋಜಾ ಉಪಸ್ಥಿತರಿದ್ದರು.
ಈ ಬೃಹತ್ ಆಧ್ಯಾತ್ಮಿಕ ಸಮಾವೇಶದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೈವಿಕ ಆಶೀರ್ವಾದ ಪಡೆಯಬೇಕೆಂದು ಆಯೋಜಕರು ವಿನಂತಿಸಿದ್ದಾರೆ.