ಉಡುಪಿ: ತುಳುನಾಡಿನ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಗುರುತಿಸಿದ ಕಂಬಳ ಕೂಟಕ್ಕೂ ಚಿನ್ನದ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಂಬಳ ಸಂಘಟಕರಿಗೆ ಚಿನ್ನದ ಬೆಲೆ ಏರಿಕೆ ಹೊರೆಯಾಗುತ್ತಿದೆ. ಪ್ರತಿ ಕಂಬಳ ಕೂಟದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಬಹುಮಾನ ನೀಡಲಾಗುತ್ತದೆ. ಚಿನ್ನದ ಬೆಲೆ ಏರಿಕೆ ಆಗುತ್ತಿರುವುದರಿಂದ ಕರಾವಳಿಯ ಕಂಬಳ ಕೂಟದಲ್ಲಿ ಇನ್ನೂ ಚಿನ್ನ ನೀಡುತ್ತಾರಾ..? ಇಲ್ಲವಾ..? ಎಂಬುದರ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಕಂಬಳ ಸಮಿತಿಯ ರಾಜ್ಯಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಸ್ಪಷ್ಟಣೆ ನೀಡಿದ್ದಾರೆ.

ಕರಾವಳಿಯಲ್ಲಿ ಕಂಬಳಕ್ಕೆ ಎಷ್ಟು ಮಹತ್ವ ಇದೆ ಹಾಗೆ ಕಂಬಳದಲ್ಲಿ ಚಿನ್ನಕ್ಕೂ ಅಷ್ಟೇ ಮಹತ್ವ ಇದೆ. ಕಂಬಳಕ್ಕೆ ಆಧುನಿಕ ಸ್ಪರ್ಶ ಕೊಡಲಾಗಿದೆ. ಅದ್ದೂರಿಯಾಗಿ ಕಂಬಳವನ್ನು ನಡೆಸಲಾಗುತ್ತದೆ. ಅದೇ ರೀತಿಯಾಗಿ ಕಂಬಳ ಕೂಟದಲ್ಲಿ ಗೆದ್ದವರಿಗೆ ಚಿನ್ನವನ್ನು ನಿಲ್ಲಿಸುವ ಪ್ರಶ್ನೆಯೆ ಇಲ್ಲ ಎಂದು ಕಂಬಳ ಸಮಿತಿಯ ರಾಜ್ಯಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಮುಂದಿನ ದಿನದಲ್ಲಿ ಚಿನ್ನದ ಬೆಲೆ ಏರಿಕೆ ಆಗುತ್ತಾ ಹೋದರೆ ಐಪಿಎಲ್ ಮಾದರಿಯಲ್ಲಿ ಕಂಬಳ ನಡೆಸಲು ಸಮಿತಿಯಿಂದ ನಿರ್ಧಾರ ಮಾಡಲಾಗಿದೆ. ಕಂಬಳ ಕೂಟದ ಆಯೋಜಕರು ಚಿನ್ನದ ಬೆಲೆ ಏರಿಕೆಯಿಂದ ಸಮಸ್ಯೆ ಆಗುತ್ತಿದೆ ಎಂಬುದನ್ನು ಸಮಿತಿಗೆ ತಿಳಿಸಿದ್ದಾರೆ.

ಇದನ್ನು ಯಾವ ರೀತಿಯಾಗಿ ಸರಿದೂಗಿಸಬೇಕು ಎಂಬುದರ ಬಗ್ಗೆ ಸಮಿತಿ ಜೊತೆ ಚರ್ಚೆ ನಡೆಸುತ್ತೇನೆ. ಈ ಹಿಂದೆ ಗೆದ್ದವರಿಗೆ ಎರಡು ಪವನ್ ಚಿನ್ನ ಕೊಡಲಾಗುತ್ತಿತ್ತು. ಈಗ ಬೆಲೆ ಏರಿಕೆಯ ಯಾಗಿರುವುದರಿಂದ ಗೆದ್ದವರಿಗೆ ಪ್ರಥಮ ಒಂದು ಪವನ್ ಚಿನ್ನ, ದ್ವಿತೀಯ ಅರ್ಧ ಪವನ್ ಚಿನ್ನ ಕೊಡಲಾಗುತ್ತಿದೆ. ಕಂಬಳ ಕೂಟದಲ್ಲಿ ಗೆದ್ದವರಿಗೆ ಚಿನ್ನ ಕೊಡದಿರುವ ಯಾವುದೇ ನಿರ್ಧಾರ ನಮ್ಮ ಮುಂದೆ ಇಲ್ಲ. ಮುಂದಿನ ದಿನದಲ್ಲಿ ಚಿನ್ನದ ಮತ್ತಷ್ಟು ಬೆಲೆ ಏರಿಕೆ ಯಾದರೆ ಸಮಿತಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.