Bengaluru 23°C
Ad

ಅಲೆಮಾರಿ ʼಶಿಳ್ಳೆಕ್ಯಾತʼ ಸಮುದಾಯಗಳಿಗೆ ಉಚಿತ ಮನೆ ನಿವೇಶನ ಸಹಿತ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹ

ನದಿಯಲ್ಲಿ ಮೀನು ಹಿಡಿದು ಜೀವನ‌ ಸಾಗಿಸುತ್ತಿರುವ 'ಶಿಳ್ಳೆಕ್ಯಾತ' ಅಲೆಮಾರಿ ಬುಡಕಟ್ಟು ಸಮುದಾಯದ ಕುಟುಂಬಗಳಿಗೆ ಉಚಿತ ಮನೆ ನಿವೇಶನ ಸಹಿತ ಸರಕಾರದ ವಿವಿಧ ಸವಲತ್ತುಗಳನ್ನು ಒದಗಿಸಿಕೊಡಬೇಕೆಂದು ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಉಡುಪಿ: ನದಿಯಲ್ಲಿ ಮೀನು ಹಿಡಿದು ಜೀವನ‌ ಸಾಗಿಸುತ್ತಿರುವ ‘ಶಿಳ್ಳೆಕ್ಯಾತ’ ಅಲೆಮಾರಿ ಬುಡಕಟ್ಟು ಸಮುದಾಯದ ಕುಟುಂಬಗಳಿಗೆ ಉಚಿತ ಮನೆ ನಿವೇಶನ ಸಹಿತ ಸರಕಾರದ ವಿವಿಧ ಸವಲತ್ತುಗಳನ್ನು ಒದಗಿಸಿಕೊಡಬೇಕೆಂದು ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.

Ad
300x250 2

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಮಿತಿಯ ಗೌರವ ಸಲಹೆಗಾರ ಸಂತೋಷ್ ಬಜಾಲ್ ಅವರು, ಉಡುಪಿ, ಕುಂದಾಪುರದ ಹಾಲಾಡಿ, ಬ್ರಹ್ಮಾವರ, ಮಲ್ಪೆ, ಕಟ್ ಬೆಳ್ತೂರು, ಕಟಪಾಡಿ, ಪಾಂಗಾಳ ಭಾಗದ ನದಿ ತೀರಗಳಲ್ಲಿ ಶಿಳ್ಳೆಕ್ಯಾತ ಸಮುದಾಯದ ಸುಮಾರು 25 ಕುಟುಂಬಗಳು ಕಳೆದ ಹಲವು ವರುಷಗಳಿಂದ ತೆಪ್ಪಗಳ ಮೂಲಕ ನದಿಯಲ್ಲಿ ಬಲೆ ಬೀಸಿ ಮೀನು ಹಿಡಿದು ಮಾರಾಟ ಮಾಡಿ ಕಷ್ಟದಾಯಕ ಜೀವನ‌ ಸಾಗಿಸುತ್ತಿವೆ. ಈ ಸಮುದಾಯಗಳು ಯಾವುದೇ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದ ಗುಡಿಸಲುಗಳಲ್ಲಿ ವಾಸಿಸುತ್ತಿರುವುದು ಮಾತ್ರವಲ್ಲದೆ ಸ್ಥಳೀಯರಿಂದ ಶೋಷಣೆಗೂ ಒಳಗಾಗುತ್ತಿದ್ದಾರೆ ಎಂದರು.

ರಾಜ್ಯ ಸರಕಾರವು ಸಮಾಜ ಕಲ್ಯಾಣ ಇಲಾಖೆ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮದಡಿ ಘೋಷಿಸಿರುವ ಸವಲತ್ತುಗಳು ಈ ಸಮುದಾಯಗಳನ್ನು ತಲುಪುತ್ತಿಲ್ಲ. ಅಲೆಮಾರಿ ಸಮುದಾಯಗಳು ತಮ್ಮ ಗುರುತಿನ ಚೀಟಿ ಸಹಿತ ಯಾವುದೇ ದಾಖಲೆಗಳಿಲ್ಲದೆ ಸರಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ.

ತಲತಲಾಂತರಗಳಿಂದ ಅಲೆಮಾರಿಯಾಗಿ ಬದುಕುತ್ತಿದ್ದ ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳು ಇವತ್ತು ತಮ್ಮ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬ ಏಕೈಕ ಉದ್ದೇಶಕ್ಕೆ ಒಂದೇ ಕಡೆ ನೆಲೆಯೂರಲು ಪ್ರಯತ್ನಿಸಿದರೂ ಅಂತಹ ಪ್ರಯತ್ನಕ್ಕೆ ಸರಕಾರಗಳು ಸ್ಪಂದಿಸದೆ ಅಲೆಮಾರಿ ಸಮುದಾಯಗಳ ವಿರೋಧಿಯಾಗಿ ವರ್ತಿಸುತ್ತಿದೆ. ಇನ್ನು ಸ್ಥಳೀಯರಿಂದ ಅನ್ಯರೆಂಬ ಅನುಮಾನಕ್ಕೂ ಅವಮಾನಕ್ಕೂ ಒಳಗಾಗಿ ದಿನನಿತ್ಯ ಕಿರುಕುಳ ದೌರ್ಜನ್ಯಗಳಿಗೆ ಒಳಗಾಗುವ ಹೀನಾಯ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಗುಲ್ವಾಡಿ ಹೊಳೆ ಬದಿಯಲ್ಲಿ ಅಲೆಮಾರಿಗಳು ಬದುಕುವ ಗುಡಿಸಲಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354 ಸಹಿತ ಹಲವು ಪ್ರಕರಣದಡಿ ಎಫ್ಐಆರ್ ದಾಖಲಾಗಿದ್ದರೂ ಆರೋಪಿಗಳನ್ನು ಈವರೆಗೂ ಬಂಧಿಸಲಾಗಿಲ್ಲ.

ಇಷ್ಟೆಲ್ಲಾ ಘಟನೆಗಳಾದರೂ ಈ ಭಾಗದ ಒಬ್ಬನೇ ಒಬ್ಬ ಶಾಸಕರಾಗಲಿ, ಸಂಸದರಾಗಲಿ ಅಲೆಮಾರಿ ಗುಡಿಸಲಿಗೆ ಭೇಟಿ ನೀಡಿಲ್ಲ ಕನಿಷ್ಟ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡದೆ ಅಲೆಮಾರಿ ಸಮುದಾಯದ ವಿರೋಧಿಯಾಗಿ ವರ್ತಿಸಿದ್ದಾರೆ. ಆಳುವ ಸರಕಾರ ಕೂಡ ಈ ಸಮುದಾಯಕ್ಕೆ ಆಸರೆಯಾಗಿ ನಿಂತಿಲ್ಲ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಕವಿರಾಜ್ ಎಸ್. ಕಾಂಚನ್, ಅಧ್ಯಕ್ಷ ಶಂಕರ, ಕಾರ್ಯದರ್ಶಿ ರಾಮ ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad