ಉಡುಪಿ: ರಾಜ್ಯಕ್ಕೆ ಉಡುಪಿಯ ಶಂಕರನಾರಾಯಣದ ವಿದ್ಯಾರ್ಥಿ ಪ್ರೀತಂ ಪೂಜಾರಿ ಟಾಪರ್ ಆಗಿದ್ದಾರೆ. ಶಂಕರನಾರಾಯಣದ ಮದರ್ ತೆರಸ ಮೆಮೋರಿಯಲ್ ಶಾಲೆ ವಿದ್ಯಾರ್ಥಿಯಾಗಿದ್ದು, 620 ಅಂಕ ಬರಬಹುದು ಎಂದು ಭಾವಿಸಿದ್ದೆ. ಟಾಪರ್ ಆಗುತ್ತೇನೆ ಅನ್ನೋ ಭರವಸೆ ಇತ್ತು. ಆದರೆ 625 ಅಂಕ ನಿರೀಕ್ಷಿಸಿರಲಿಲ್ಲ ಎಂದರು.
ಶಾಲೆಯ ಉತ್ತಮ ಪಾಠದಿಂದ ಇದು ನನಗೆ ಸಾಧ್ಯವಾಗಿದೆ. ಪಾಠವನ್ನು ಸರಿಯಾಗಿ ಕೇಳಿಸಿಕೊಂಡರೆ ಸಾಕು ಅಂಕ ಪಡೆಯಬಹುದು. ನಾನು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ನನ್ನ ಹ್ಯಾಂಡ್ ರೈಟಿಂಗ್ ಚೆನ್ನಾಗಿರಲಿಲ್ಲ. ಹಾಗಾಗಿ ಉತ್ತಮ ಅಂಕ ತಪ್ಪಬಹುದು ಅನ್ನೋ ಆತಂಕ ಇತ್ತು. ಶಿಕ್ಷಕರು ನನ್ನ ಹ್ಯಾಂಡ್ ರೈಟಿಂಗ್ ಅನ್ನು ಚೆನ್ನಾಗಿ ತಿದ್ದಿದ್ದರು. ಇವತ್ತು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಉತ್ತಮ ಅಂಕ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಕೂಲ್ ಆಗಿ ಶುಭ ಕಾರ್ಯ ಅಟೆಂಡ್ ಆಗಿದ್ದೆ ಎಂದರು.

ತಂದೆ ಕರೆ ಮಾಡಿ 625 ಅಂಕ ಬಂದಿದೆ ಎಂದು ಹೇಳಿದರು. ನನಗೆ ನಂಬಲು ಸಾಧ್ಯವಾಗಿಲ್ಲ. ಮುಂದೆ ಇಂಜಿನಿಯರಿಂಗ್ ಮಾಡಬೇಕು ಎಂದು ಆಸೆ ಇದೆ. ಅಮ್ಮ ಐಎಎಸ್ ಮಾಡಬೇಕು ಎನ್ನುತ್ತಾರೆ. ನನಗೆ ಯಾವತ್ತೂ ಕೂಡ ನಂಬರ್ ಒನ್ ಆಗಬೇಕು ಅನ್ನೋ ಆಸೆ. ಈ ರಿಸಲ್ಟ್ ಮೂಲಕ ನನ್ನ ಆಸೆ ಈಡೇರಿದೆ. ನನಗೆ ತುಂಬಾ ಖುಷಿಯಾಗಿದೆ. ಶಾಲೆಯ ಉತ್ತಮ ವಾತಾವರಣ ಮನೆಯವರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ.
ನಾನು ಆರಾಮಾಗಿ ಒತ್ತಡ ಇಲ್ಲದೆ ಪರೀಕ್ಷೆ ಬರೆದಿದ್ದೇನೆ. ಪಾಠ ಮಾತ್ರವಲ್ಲದೆ ಆಟ ಕ್ವಿಜ್ ನಲ್ಲೂ ನನಗೆ ಆಸಕ್ತಿ ಇದೆ. ಈ ಬಾರಿ ಕ್ವಿಜ್ ನಲ್ಲೂ ನಾನು ಬಹುಮಾನ ಪಡೆದಿದ್ದೆ ಎಂದರು.

