ತುಮಕೂರು: ಕಾರಿನಲ್ಲಿ ಪುನುಗು ಬೆಕ್ಕನ್ನು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಮೂವರನ್ನು ತುಮಕೂರಿನ ತಿಪಟೂರು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತಿಪಟೂರು ತಾಲೂಕಿನ ಕೆ.ಬಿ. ಕ್ರಾಸ್ ಬಳಿಯ ಹಾಲುಗೋಣ ಗ್ರಾಮದ ಸಮೀಪ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ಅಶೋಕ್ (55), ರವಿ ಕುಮಾರ್ (40) ಹಾಗೂ ಚಿಕ್ಕನಾಯಕನಹಳ್ಳಿ ಮೂಲದ ಪರೇಶ್ ಸ್ವಾಮಿ (52) ಎಂದು ಗುರುತಿಸಲಾಗಿದೆ. ಕೆ.ಬಿ. ಕ್ರಾಸ್ ಹಾಗೂ ಹಾಲುಗೋಣ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಬೇಟೆ ನಡೆಯುತ್ತಿದೆ ಎಂಬ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಆಧರಿಸಿ ತಿಪಟೂರು ಎಸಿಎಫ್ ಭರತ್ ಅವರ ಮಾರ್ಗದರ್ಶನದಲ್ಲಿ ಆರ್ಎಫ್ಒ ಅಮಿತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಕಾರ್ಯಾಚರಣೆ ವೇಳೆ ಆರೋಪಿಗಳು ಪುನುಗು ಬೆಕ್ಕನ್ನು ಅಕ್ರಮವಾಗಿ ಬೇಟೆಯಾಡಿ, ಬಳಿಕ ಮಾರಾಟ ಮಾಡುವ ಉದ್ದೇಶದಿಂದ ಕಾರಿನಲ್ಲಿ ಸಾಗಿಸುತ್ತಿದ್ದರೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತಕ್ಷಣವೇ ಮೂವರನ್ನೂ ಬಂಧಿಸಿ, ಪುನುಗು ಬೆಕ್ಕನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.
ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಕಾರನ್ನೂ ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಪುನುಗು ಬೆಕ್ಕನ್ನು ಎಲ್ಲಿ ಬೇಟೆಯಾಡಲಾಗಿತ್ತು, ಯಾರಿಗೆ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು ಹಾಗೂ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

