ವಿಯೆಟ್ನಾಂ: ಜಗತ್ತಿನ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾದ 73ನೇ ಆವೃತ್ತಿಯ ‘ಮಿಸ್ ವರ್ಲ್ಡ್ 2026 ಕಿರೀಟವನ್ನು ಡೊಮಿನಿಕನ್ ರಿಪಬ್ಲಿಕ್‌ನ ಜೊಹೈರಿ ಮೋಲಾ ಡೊಮಿಂಗುಯೆಜ್ ತಮ್ಮದಾಗಿಸಿಕೊಂಡಿದ್ದಾರೆ.

ವಿಯೆಟ್ನಾಂನ ನ್ಹಾ ಟ್ರಾಂಗ್ ನಗರದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರೋಪ ಸಮಾರಂಭದಲ್ಲಿ ಅವರಿಗೆ ಈ ಗೌರವ ಒಲಿಯಿತು. ಭಾರತವನ್ನು ಪ್ರತಿನಿಧಿಸಿದ್ದ ನಿಕಿತಾ ಪೋರ್ವಾಲ್ ಅವರು ತೀವ್ರ ಪೈಪೋಟಿಯ ನಡುವೆ ಟಾಪ್ 40ರ ಹಂತದವರೆಗೆ ತಲುಪಿ, ನಂತರ ಸ್ಪರ್ಧೆಯಿಂದ ಹೊರಬಿದ್ದರು.

ಈ ಬಾರಿಯ ಸ್ಪರ್ಧೆಯಲ್ಲಿ ಸ್ಪೇನ್‌ನ ಎಲಿಸಬೆತ್ ರೇನೆಸ್ ಅಲಾಬೆರ್ನ್ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ಮಲೇಷ್ಯಾದ ತನುಷಿಯಾ ಚೆಟ್ಟಿ ಎರಡನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡರು. ಕಳೆದ ಆವೃತ್ತಿಯ ಮಿಸ್ ವರ್ಲ್ಡ್ ಪಟ್ಟ ಗೆದ್ದಿದ್ದ ಥೈಲ್ಯಾಂಡ್‌ನ ಸುಚಾತಾ ಚುವಾಂಗ್‌ಸ್ರಿ ಅವರು ನೂತನ ಸುಂದರಿ ಜೊಹೈರಿ ಮೋಲಾಗೆ ನೀಲಿ ಬಣ್ಣದ ಕಿರೀಟ ತೊಡಿಸಿದರು. ವಿಶ್ವದಾದ್ಯಂತ 110ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದ ಈ ಕೂಟವು ಮಿಸ್ ವರ್ಲ್ಡ್ ಸಂಸ್ಥೆಯ 75ನೇ ವರ್ಷದ ಸಂಭ್ರಮಕ್ಕೂ ಸಾಕ್ಷಿಯಾಯಿತು.

24 ವರ್ಷದ ಜೊಹೈರಿ ಮೋಲಾ ವೃತ್ತಿಯಲ್ಲಿ ಶಿಕ್ಷಕಿ ಹಾಗೂ ಪತ್ರಕರ್ತೆಯಾಗಿದ್ದು, ಉದ್ಯಮ ನಿರ್ವಹಣೆ ಮತ್ತು ಆಡಳಿತ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಹಿಂದುಳಿದ ಸಮುದಾಯದ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ನೀಡುವ ಉದ್ದೇಶದಿಂದ ಅವರು ‘ವಾಯ್ಸಸ್ ಆಫ್ ಟುಮಾರೋ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅಂತಿಮ ಸುತ್ತಿನಲ್ಲಿ ತಮ್ಮ ಈ ಸಾಮಾಜಿಕ ಸೇವೆಯ ಮಹತ್ವವನ್ನು ವಿವರಿಸಿದ ಅವರು ತೀರ್ಪುಗಾರರ ಮನಗೆದ್ದರು. ಡೊಮಿನಿಕನ್ ರಿಪಬ್ಲಿಕ್‌ಗೆ ಮಿಸ್ ವರ್ಲ್ಡ್ ಕಿರೀಟ ಸಿಗುತ್ತಿರುವುದು ಇದು ಎರಡನೇ ಬಾರಿಯಾಗಿದ್ದು, 1982ರಲ್ಲಿ ಮರಿಯಾಸೆಲಾ ಅಲ್ವಾರೆಜ್ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು.

ಭಾರತದ ಪರವಾಗಿ ಕಣಕ್ಕಿಳಿದಿದ್ದ ನಿಕಿತಾ ಪೋರ್ವಾಲ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಟಾಪ್ 40 ಹಂತಕ್ಕೇರಿದರು. ಆದರೆ ಅಂತಿಮ ಟಾಪ್ 20ರ ಘಟ್ಟಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೂ ಮಿಸ್ ವರ್ಲ್ಡ್ ವೇದಿಕೆಯಲ್ಲಿ ಸತತ ಎಂಟು ಆವೃತ್ತಿಗಳಲ್ಲಿಯೂ ಭಾರತೀಯ ಸ್ಪರ್ಧಿಗಳು ಟಾಪ್ ಸ್ಥಾನಗಳಲ್ಲಿ ಗುರುತಿಸಿಕೊಳ್ಳುವ ಸಾಧನೆಯನ್ನು ನಿಕಿತಾ ಕಾಯ್ದುಕೊಂಡಿದ್ದಾರೆ.

ಅಂತಿಮ ದಿನದ ಸ್ಪರ್ಧೆಯಲ್ಲಿ ನಿಕಿತಾ ಅವರು ಸೂಕ್ಷ್ಮವಾದ ಹೂವಿನ ವಿನ್ಯಾಸ ಹೊಂದಿದ ಸುಂದರ ಗೌನ್ ಧರಿಸಿ ಗಮನಸೆಳೆದರು. ಜೊತೆಗೆ, ‘ಡ್ಯಾನ್ಸಸ್ ಆಫ್ ದಿ ವರ್ಲ್ಡ್’ ಸುತ್ತಿನಲ್ಲಿ ಮೀನಾಕ್ಷಿ ದೇವಿಯ ರೂಪದಲ್ಲಿ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಿದರು. ಆತಿಥೇಯ ದೇಶ ವಿಯೆಟ್ನಾಂಗೆ ಗೌರವ ಸಲ್ಲಿಸಲು ಅಲ್ಲಿನ ಸಾಂಪ್ರದಾಯಿಕ ಉಡುಪಿನಲ್ಲೂ ಮಿಂಚಿದರು. ನಿಕಿತಾ ಅವರ ಈ ಪ್ರಯಾಣವನ್ನು ಶ್ಲಾಘಿಸಿರುವ ಮಿಸ್ ಇಂಡಿಯಾ ಸಂಸ್ಥೆ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಅತ್ಯಂತ ಘನತೆಯಿಂದ ಹಾಗೂ ಆತ್ಮವಿಶ್ವಾಸದಿಂದ ಪ್ರತಿನಿಧಿಸಿದ್ದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಿದೆ.