News Karnataka Kannada
Thursday, May 09 2024
ಕರ್ನಾಟಕ

SUNDAY STORY ಸರ್ಕಾರಿ ದಾಖಲಾತಿಗಳಲ್ಲಿ ಲಭ್ಯವಿಲ್ಲದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಕೊಡಗಿನ ಬೇಳೂರಿನ ಭೇಟಿ

Photo Credit :

  SUNDAY  STORY   ಸರ್ಕಾರಿ ದಾಖಲಾತಿಗಳಲ್ಲಿ   ಲಭ್ಯವಿಲ್ಲದ  ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ  ಅವರ ಕೊಡಗಿನ ಬೇಳೂರಿನ ಭೇಟಿ

ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಅವರು  1934 ರಲ್ಲಿ ಕೊಡಗಿಗೆ ಭೇಟಿ ನೀಡಿದ್ದು ನಿಮಗೆ ಗೊತ್ತೆ ಇದೆ. ಆ ಸಮಯದಲ್ಲಿ ಅವರು ಸುಂಟಿಕೊಪ್ಪ ಸಮೀಪದ ಗುಂಡುಗುಟ್ಟಿಯ ಮಂಜುನಾಥಯ್ಯ ಅವರ ಮನೆಯಲ್ಲಿ ತಂಗಿದ್ದರು ಎಂಬುದಕ್ಕೆ ಸರ್ಕಾರದ ದಾಖಲೆಗಳೂ ಇವೆ. ಆದರೆ ಅಲ್ಲಿ ತಂಗುವುದಕ್ಕೂ ಮೊದಲು ಗಾಂಧೀಜಿ  ಬೇಳೂರು ಬಾಣೆಯ ಪಕ್ಕದಲ್ಲೆ ಇರುವ  ಬಿ ಬಿ ಗುರಪ್ಪ ಅವರ ಮನೆಗೂ ಭೇಟಿ ನೀಡಿದ್ದರು ಎಂಬುದು ಯಾರಿಗೂ ಗೊತ್ತಿಲ್ಲ. ಅಷ್ಟೇ ಅಲ್ಲ ಜಿಲ್ಲೆಯ  ಯಾವುದೇ ದಾಖಲೆಗಳಲ್ಲೂ ಇಲ್ಲ. ಗಾಂಧೀಜಿ ಗುರಪ್ಪ ಅವರ ಮನೆಗೆ ಭೇಟಿ ನೀಡುವುದಕ್ಕೂ ಒಂದು ಬಲವಾದ ಕಾರಣವಿದೆ. ಇದು ಅಕಾಸ್ಮಾತ್ ಒಲಿದು ಬಂದ ಅದೃಷ್ಟ  ಆಗಿದೆ. ಗುರಪ್ಪ ಅವರು ಸಕಲೇಶಪುರದ ಶಾಸಕರಾಗಿದ್ದ  ಬಿ ಬಿ ಶಿವಪ್ಪ ಅವರ ಸಹೋದರ.  ವಾಸ್ತವವಾಗಿ  ಸೋಮವಾರಪೇಟೆಗೆ  ಅಂದು  ಗಾಂಧೀಜಿ ಅವರು ಭೇಟಿ ನೀಡುವ ಕಾರ್ಯಕ್ರಮ ಆಯೋಜನೆ ಮಾಡುವ  ಸಂದರ್ಭದಲ್ಲಿ ಡಿ ವಿನೋದ್ ಶಿವಪ್ಪ ಅವರ ಅಜ್ಜಿ  ಬಸವೇಶ್ವರ ರಸ್ತೆಯಲ್ಲಿರುವ   ಶ್ರೀಮತಿ  ದೊಡ್ಡಮನೆ  ಸಾಕಮ್ಮ ಅವರ ಮನೆಯಲ್ಲಿ ತಂಗುವುದೆಂದು ಯೋಜಿಸಲಾಗಿತ್ತು.  ಆ ಸಮಯದಲ್ಲೆ ಅವರು ಕೊಡಗಿನ ಮೊಟ್ಟ ಮೊದಲ ಮಹಿಳಾ ಉದ್ಯಮಿ ಮತ್ತು ಕಾಫಿ ರಫ್ತುದಾರೆ ಎಂದೂ ಗುರುತಿಸಿಕೊಂಡಿದ್ದರು.  ಸಾವಿರಾರು ಎಕರೆ ಕಾಫಿ ತೋಟ ಹೊಂದಿದ್ದ ಅವರು ಆಗ ಕಾಫಿಯನ್ನು  ಇಂಗ್ಲೆಂಡ್ ಗೆ  ರಫ್ತು ಮಾಡುತಿದ್ದರಲ್ಲದೆ  ಬೆಂಗಳೂರಿಗೂ ಕಾಫಿಯನ್ನು ಪರಿಚಯಿಸಿದ ಖ್ಯಾತಿ  ಹೊಂದಿದ್ದರು.     ಆಗ ಸ್ವಾತಂತ್ರ್ಯ ಹೋರಾಟ ದಿನೇ ದಿನೇ ಕಾವು ಪಡೆಯುತಿತ್ತು. ಗಾಂಧೀಜಿಯವರು  ಹೋದಲ್ಲೆಲ್ಲ ಸಹಸ್ರ ಸಹಸ್ರ ಸಂಖ್ಯೆಯಲ್ಲಿ  ಜನರು ಸೇರುತಿದ್ದರು. ಇವರ ಚಳವಳಿಗೆ ತಡೆ ಒಡ್ಡುವುದೇ ಬ್ರಿಟಿಷರ ಕೆಲಸವಾಗಿತ್ತು. ಸಾಕಮ್ಮ ಅವರ ಮನೆಗೆ ಗಾಂಧಿ ಭೇಟಿ ಕೊಡುವ ವಿಷಯ ತಿಳಿದಿದ್ದೇ ತಡ  ಬ್ರಿಟಿಷರು  ಸಾಕಮ್ಮ   ಗಾಂಧಿಜಿ ಅವರಿಗೆ ಆಶ್ರಯ ನೀಡಿದರೆ  ನಿಮ್ಮೊಂದಿಗಿನ ಕಾಫಿ ವ್ಯಾಪಾರವನ್ನು ಕಡಿದುಕೊಳ್ಳುವುದಾಗಿ ಬೆದರಿಕೆ ಒಡ್ಡಿದರು. ಬೆದರಿಕೆಗೆ ಮಣಿದ ಸಾಕಮ್ಮ ಆತಿಥ್ಯಕ್ಕೆ ಹಿಂದೇಟು ಹಾಕಿದರೆನ್ನಲಾಗಿದೆ.

 ಆ ಸಮಯದಲ್ಲಿ ಆಯೋಜಕರು ಬೇಳೂರು ಬಾಣೆ ಪಕ್ಕದ ಬಿ ಬಿ  ಗುರಪ್ಪ ಅವರ  ಮನೆಯಲ್ಲಿ  ಆತಿಥ್ಯಕ್ಕೆ ಏರ್ಪಾಡು ಮಾಡಿದರು. ಆದರೆ ಗಾಂಧೀಜಿ ಅವರ  ಭೇಟಿಯ ಅಭೂತಪೂರ್ವ ಕ್ಷಣಗಳಿಗೆ ಏಕೈಕ ಸಾಕ್ಷಿ ಆಗಿದ್ದ  ಗುರಪ್ಪ ಅವರ ಪತ್ನಿ  ಗಂಗಮ್ಮ (101) ಶತಾಯುಷಿಗಳಾಗಿ  2015 ರಂದು ಅದೇ ಮನೆಯಲ್ಲಿ ನಿಧನರಾದರು.   ಗಂಗಮ್ಮ ಅವರು  ಸಕಲೇ಼ಶಪುರದ ಐಗೂರಿನವರಾಗಿದ್ದು  3 ನೇ ತರಗತಿವರೆಗೂ ಓದಿದ್ದರು. ಗಾಂಧೀಜಿ ಬಂದಾಗ ಅವರಿಗೆ 19 ವರ್ಷ ವಯಸ್ಸು. 16 ನೇ ವಯಸ್ಸಿಗೆ ಮದುವೆ ಆದ ಅವರಿಗೆ ಆಗಲೇ ಒಬ್ಬ ಮಗನಿದ್ದ.

ತಮ್ಮ ತಾಯಿ ಹೇಳುತಿದ್ದ ಆ ಅಪರೂಪದ ಕ್ಷಣಗಳನ್ನು  ಗಂಗಮ್ಮ ಅವರ ಕೊನೆ ಮಗ  ಬಿ ಜಿ ಗುರುಮಲ್ಲೇಶ (75) ನನ್ನೊಂದಿಗೆ ಹಂಚಿಕೊಂಡಿದ್ದು ಹೀಗೆ. ಗಾಂಧಿಜಿಯು ಬೆಳಿಗ್ಗೆ 10 ಘಂಟೆಯಿಂದ ಸಂಜೆ 5 ಘಂಟೆಯವರೆಗೆ ನಮ್ಮ ಮನೆಯ ಉಪ್ಪರಿಗೆ ಕೋಣೆಯಲ್ಲಿದ್ದರು ಆಗಲೂ ಅವರು ಚರಕದಿಂದ ನೂಲುತಿದ್ದರು.  ಮದ್ಯೆ  ಕೆಳಗಿಳಿದು ಬಂದು ವೆರಾಂಡದಲ್ಲಿ ಕುಳಿತು ಜನರಿದ ವಂತಿಗೆ ಸ್ವೀಕರಿಸುತಿದ್ದರು. ಜನರ ಅಹವಾಲು ಕೇಳುತಿದ್ದ ಗಾಂಧೀಜಿ ಅವರು ಹೇಳುತಿದ್ದುದನ್ನು ಅವರ ಆಪ್ತ ಕಾರ್ಯದರ್ಶಿ ಮಹದೇವ ದೇಸಾಯಿ  ನೋಟ್ ಮಾಡಿಕೊಳ್ಳುತಿದ್ದರು. ಗಾಂಧೀಜಿ ಬಂದಿದ್ದಾಗ ಅವರನ್ನು ನೋಡಲು ವಾಹನಗಳು ರಸ್ತೆಯ ಒಂದು ಕಿಲೋಮೀಟರ್ ದೂರದವರೆಗೂ ಸಾಲುಗಟ್ಟಿ ನಿಂತಿದ್ದವು. ಅವರ ಜತೆ 40 ಅನುಯಾಯಿಗಳ ತಂಡವೇ ಬಂದಿತ್ತು.  ಬೆಳಿಗ್ಗೆ ತಿಂಡಿ , ಮದ್ಯಾಹ್ನದ ಊಟ ಮತ್ತು ಸಂಜೆಯ ಕಾಫಿಯನ್ನೂ ಅವರೇ ತಯಾರಿಸಿಕೊಂಡರು.  ಗಾಂಧಿಜಿ ಅವರಿಗೆ ಹಾಲಿಗಾಗಿ  ಆಡುಗಳನ್ನೂ ತರಿಸಿ ಮನೆ ಮುಂದೆಯೇ ಕಟ್ಟಿ ಹಾಕಲಾಗಿತ್ತು. ಸಂಜೆ 5 ಘಂಟೆಗೆ ಗಾಂಧೀಜಿ ಮನೆಯಿಂದ ತೆರಳಿ ಗುಂಡುಗುಟ್ಟಿ ಕಡೆಗೆ ಪ್ರಯಾಣ ಬೆಳೆಸಿದರು ಎಂದರು.   ಗಾಂಧೀಜಿ ಅವರಿಗೆ ಆತಿಥ್ಯ ನೀಡಿದ್ದ ಗುರಪ್ಪ (40) ಅವರು  ಅನಾರೋಗ್ಯದಿಂದ 1945 ರಲ್ಲೇ ದೈವಾಧೀನರಾದರು.   ಗಾಂಧೀಜಿ ಅವರಿಗೆ ಆತಿಥ್ಯ ನೀಡಿದ್ದ ಈ ಮನೆ 1920 ರಲ್ಲಿ ನಿರ್ಮಾಣವಾಗಿದೆ.  

 ಗಾಂಧೀಜಿ ಬಂದು ಹೋದ ನೆನಪಿಗಾಗಿ  ಗುರುಮಲ್ಲೇಶ ಅವರ ಮನೆಪಕ್ಕದ ತೋಟದಲ್ಲಿರುವ ಆನೆ ಗಾತ್ರದ ಕಲ್ಲು ಬಂಡೆಯು ಗಾಂಧಿ ಕಲ್ಲು ಎಂದೇ ಹೆಸರುವಾಸಿ ಆಗಿದೆ. ಆದರೆ ಈ ಊರಿನ ಬಹುತೇಕ ಗ್ರಾಮಸ್ಥರಿಗೆ ಗಾಂಧಿಜಿ ಇಲ್ಲಿಗೆ ಬಂದಿದ್ದು ಈಗಲೂ ಗೊತ್ತಿಲ್ಲ. ಗಾಂಧಿ ಕಲ್ಲಿನಿಂದ  ದೂರದ  ಪ್ರಕೃತಿಯ ವಿಹಂಗಮ ನೋಟದಲ್ಲಿ  ಹಾರಂಗಿ ಹಿನ್ನೀರು , ಕಬ್ಬಿಣ ಸೇತುವೆ ಸಮೀಪದ ಮನೆಗಳೂ ಕಾಣುತ್ತವೆ.  ಬೇಳೂರು ಬಾಣೆಗೆ ನಿತ್ಯ ಬರುವ ಪ್ರವಾಸಿಗರು  ತೋಟದಲ್ಲಿರುವ ಗಾಂಧಿ ಕಲ್ಲಿಗೆ ಭೇಟಿ ನೀಡಿ ಪ್ರಕೃತಿಯ ರಮಣೀಯ ದೃಶ್ಯ ವೀಕ್ಷಿಸಲು  ಅನುವು ಮಾಡಿಕೊಡುವುದಾಗಿ ಗುರುಮಲ್ಲೇಶ ತಿಳಿಸಿದ್ದು   ಬೇಳೂರು ಬಾಣೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಈಗ ಮತ್ತೊಂದು ಪ್ರವಾಸೀ ತಾಣ ದೊರೆತಂತೆ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು