ನಂಜನಗೂಡು: ಗ್ರಾಮೀಣ ಪ್ರದೇಶದಲ್ಲಿರುವ ಮೌಡ್ಯತೆಯನ್ನು ಹೋಗಲಾಡಿಸಲು ರಾಷ್ಟ್ರೀಯ ಸೇವಾ ಯೋಜನೆಯ, ಶಿಬಿರಗಳು ಅತ್ಯವಶ್ಯಕವಾಗಿವೆ ಎಂದು ವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ ತಿಮ್ಮಯ್ಯ ಅಭಿಪ್ರಾಯಪಟ್ಟರು.
ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಮೈಸೂರು ಮಹಾರಾಜ ಕಾಲೇಜು ಹಾಗೂ ವಿ.ವಿ ಸಂಜೆ ಕಾಲೇಜಿನ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಶಿಬಿರಾರ್ಥಿಗಳಿಗೆ ಎನ್ ಎಸ್ ಎಸ್ ಶಿಬಿರವು ಶಿಸ್ತು, ಸಮಯ ಪಾಲನೆ, ನಾಯಕತ್ವದ ಗುಣಗಳನ್ನು ಕಲಿಯಲು ಉತ್ತಮವಾದ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಇದನ್ನು ಗಮನದಲ್ಲಿಟ್ಟುಕೊಂಡು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಮಾದರಿ ಗ್ರಾಮ ಮತ್ತು ಸ್ವಚ್ಛ ಗ್ರಾಮ ವನ್ನಾಗಿ ಮಾಡಬೇಕೆಂಬುದು ಎನ್ಎಸ್ಎಸ್ ಉದ್ದೇಶವಾಗಿದ್ದು, ಇದನ್ನು ಗ್ರಾಮಸ್ಥರು ಮುಂದುವರಿಸಿಕೊಂಡು ಹೋಗಬೇಕು.
ಮಾನವನ ವಿರೋಧಿ ಆಚರಣೆಗಳನ್ನು ಹೋಗಲಾಡಿಸಿ, ಮೌಢ್ಯತೆ ಆಚರಣೆಯಿಂದ ಗ್ರಾಮೀಣರು ಹೊರಬಂದಾಗ ಮಾತ್ರ ಅರಿವಿನ ಜ್ಞಾನ ತೆರೆಯುತ್ತದೆ. ಪ್ರತಿ ಗ್ರಾಮಗಳಲ್ಲಿ ದೇವಸ್ಥಾನಗಳನ್ನು ಕಟ್ಟುವ ಬದಲು ಒಂದೊಂದು ಗ್ರಂಥಾಲಯಗಳನ್ನು ಕಟ್ಟುವ ಕೆಲಸಕ್ಕೆ ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು.
ನಂತರ ಹುಳಿಮಾವು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಜೀವನವನ್ನು ಹೇಗೆ ನಿಭಾಯಿಸಬೇಕೆಂದು ಕಲಿಸುತ್ತದೆ. ಏಳು ದಿನಗಳ ಕಾಲ ನಡೆದ ಶಿಬಿರದಲ್ಲಿ ಕಲಿತಿರುವುದನ್ನು ಜೀವನದುದ್ದಕ್ಕೂ ಪಾಲನೆ ಮಾಡಿಕೊಂಡು ಹೋಗಬೇಕು.
ಹಾಗೆಯೇ ಭಾವನೆಗಳನ್ನು ಇಟ್ಟುಕೊಂಡು ಸುಖ ದುಃಖಗಳನ್ನು ಹಂಚಿಕೊಳ್ಳುತ್ತಾ ಸಾಗುವುದೇ ಜೀವನವಾಗಿದೆ. ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಬೊಕ್ಕಹಳ್ಳಿ ಗ್ರಾಮದಲ್ಲಿ ಕುಟುಂಬಗಳ ಸಮೀಕ್ಷೆ ನಡೆಸಿ ಜನರ ಕುಂದು ಕೊರತೆ ಮತ್ತು ಸಮಸ್ಯೆಗಳ ಬಗ್ಗೆ ಸರ್ವೆ ನಡೆಸಿ ನಮ್ಮ ಗ್ರಾಮ ಪಂಚಾಯಿತಿಗೆ ವರದಿಯನ್ನು ನೀಡಿದ್ದಾರೆ.
ಈ ವರದಿಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಬಜೆಟ್ ತಯಾರಿಸಿ ಅನುದಾನಗಳನ್ನು ನೀಡಿ ಗ್ರಾಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎನ್ಎಸ್ಎಸ್ ವಿದ್ಯಾರ್ಥಿಗಳಿಂದಲೇ ನಾಲ್ಕು ಸಾವಿರ ಹಸಿ ಕಸ ಮತ್ತು ಒಣ ಕಸ ವಿಂಗಡಿಸುವ ಬಕೆಟ್ ಗಳನ್ನು ವಿತರಣೆ ಮಾಡಿದ್ದೇವೆ. ಕಂದಾಯ ಮುಕ್ತ ಮಾಡುವ ಗುರಿಯನ್ನು ಹೊಂದಿದ್ದೇವೆ.
ಸಾಮಾಜಿಕ ಸೇವೆಯನ್ನು ಮಾಡುವಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳ ಪಾತ್ರ ಮಹತ್ವವಾಗಿದ್ದು, ಎನ್ಎಸ್ಎಸ್ ಬಳಸಿಕೊಂಡು ತೋಪು ನಿರ್ಮಾಣ, ಸ್ಮಶಾನಗಳ ಅಭಿವೃದ್ಧಿ, ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಬೊಕ್ಕಹಳ್ಳಿ ಗ್ರಾಮವನ್ನು ಶೂಟಿಂಗ್ ಸ್ಪಾಟ್ ಮಾಡಬೇಕೆಂದು ಪಣತೊಟ್ಟಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿ ಷಣ್ಮುಗಂ ಅಧ್ಯಕ್ಷತೆಯನ್ನು ವಹಿಸಿದ್ದರು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿ ಷಣ್ಮುಗಂ, ಆರಕ್ಷಕ ನಿರೀಕ್ಷಕ ಆನಂದ್, ಪಿಡಿಒ ಮಲ್ಕುಂಡಿ ಮಹದೇವಸ್ವಾಮಿ, ರೈತ ಮುಖಂಡ ಬೊಕ್ಕಹಳ್ಳಿ ನಂಜುಂಡಸ್ವಾಮಿ,
ಕಾಂಗ್ರೆಸ್ ಮುಖಂಡ ಸೋಮಸುಂದರ್, ಮಹಾರಾಜ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ.ಪಿ.ಎಸ್ ಮಧುಸೂದನ್, ಡಾ.ಎಸ್. ಕೃಷ್ಣಪ್ಪ, ವಿವಿ ಸಂಜೆ ಕಾಲೇಜಿನ ಶಿಬಿರಾಧಿಕಾರಿಗಳಾದ ಡಾ.ನಿಂಗರಾಜು, ಡಾ.ಶಿವಶಂಕರ್ , ಪ್ರಾಧ್ಯಾಪಕರಾದ ಸೌಭಾಗ್ಯವತಿ, ಡಾ.ಬಸವರಾಜು, ಜ್ಯೋತಿ, ಡಾ.ಪ್ರವೀಣ್, ಮಹೇಶ್, ಜಯವರ್ಧನ್ ಸೇರಿದಂತೆ ಶಿಬಿರಾರ್ಥಿಗಳು ಹಾಜರಿದ್ದರು.

