ಮೈಸೂರು: ಭಾರತ ದೇಶವನ್ನು ಕಟ್ಟಲು ಯುವಕರು ಮುಂದಾಗಬೇಕು. ಯಾವುದೇ ಜಾತಿ ಮತ್ತು ಧರ್ಮಕ್ಕೆ ಅಂಟಿಕೊಳ್ಳದೆ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಯುವಕರು ಪಣತೊಡಬೇಕು ಎಂದು ಬೋಗಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಡಾ.ರಮೇಶ್ ಬಾಬು ವಿ.ಆರ್ ಕರೆ ನೀಡಿದರು.
ಮೈಸೂರು ನಗರದ ಯುವರಾಜ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಂತಿಮ ವರ್ಷದ ಸ್ವಯಂ ಸೇವಕರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಮಾಜ ಮತ್ತು ಸಮುದಾಯದ ಸೇವೆ ಮಾಡುವುದರ ಮೂಲಕ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸೇವಾ ಮನೋಭಾವವನ್ನು ರೂಢಿಸಿಕೊಂಡು ಗ್ರಾಮಗಳ ಸ್ವಚ್ಛತೆ, ಅವುಗಳ ಅಭಿವೃದ್ಧಿ ಹಾಗೂ ಸಮುದಾಯಗಳನ್ನು ಕೊಂಡಿಗಳಂತೆ ಬೆಸೆಯುವ ಮನೋಭಾವವನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ನಾನು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾಗಿ ಹಲವಾರು ವರ್ಷಗಳ ತಮ್ಮ ಅನುಭವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಉಪನ್ಯಾಸಕರಾದ ಹೆಚ್.ಆರ್ ದಿನೇಶ್ ಮಾತನಾಡಿ, ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಪರಿಶುದ್ಧತೆಯ ಜೊತೆಗೆ ಸಮಾಜದ ಸ್ವಚ್ಛತೆ ಮತ್ತು ಸ್ವಾಸ್ಥ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಸದೃಢ ಮತ್ತು ಪ್ರಬುದ್ಧ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳು ತಮ್ಮ ಓದಿನ ಜೊತೆ ಜೊತೆಯಲ್ಲಿ ಸಮಾಜ ಸೇವೆ ಮಾಡುವ ಮೂಲಕ ಕಾಲೇಜು, ರಾಜ್ಯ ಮತ್ತು ರಾಷ್ಟ್ರಕ್ಕೆ ಕೀರ್ತಿ ತರಬೇಕು. ಇಂದಿನ ಯುವ ಜನತೆ ಯಾವುದೇ ಜಾತಿ,ಧರ್ಮ ಮತ್ತು ಲಿಂಗ ತಾರತಮ್ಯವನ್ನು ಮಾಡದೇ ಸಹೋದರ ಭಾವವನ್ನು ಬೆಳೆಸಿಕೊಂಡು ದೇಶ ಸೇವೆಗೆ ಮುಂದಾದರೆ ಸದೃಢ ಮತ್ತು ಪ್ರಬುದ್ಧ ಭಾರತವನ್ನು ನಿರ್ಮಿಸಬಹುದೆಂದು ತಿಳಿಸಿದರು.
ಇನ್ನೂ ಅಂತಿಮ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರವನ್ನು ವಿತರಿಸಿ ಬಿಳ್ಕೋಡುಗೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಯುವರಾಜ ಕಾಲೇಜಿನ ಕಾರ್ಯಕ್ರಮಾಧಿಕಾರಿಗಳಾದ ಗಿರಿಶ್ಚಂದ್ರ ಎಂ.ಕೆ, ಅನಿಲ್ ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಹಾಜರಿದ್ದರು.

