ನಂಜನಗೂಡು: ಮೇ.1 ರಂದು ಶುಕ್ರವಾರ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ವಿಶ್ವಕ್ಕೆ ಶಾಂತಿ ಸಾರಿದ ಭಗವಾನ್ ಗೌತಮ ಬುದ್ಧರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದು ಧಮ್ಮ ಧ್ವನಿ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಆರ್ ಮಹದೇವ್ ಹೇಳಿದರು.
ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಧಮ್ಮ ಧ್ವನಿ ಸೇವಾ ಟ್ರಸ್ಟ್ ವತಿಯಿಂದ ನಂಜನಗೂಡಿನ ತಥಾಗತ ಬುದ್ಧ ವಿಹಾರದಲ್ಲಿ ಈ ಬಾರಿ ಅರ್ಥಪೂರ್ಣವಾಗಿ ಭಗವಾನ್ ಬುದ್ಧರ ಜಯಂತಿಯನ್ನು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ ನಂಜನಗೂಡಿನ ಬುದ್ಧನಗರದಲ್ಲಿರುವ ಬುದ್ಧ ವಿಹಾರದಲ್ಲಿ ಧಮ್ಮಧ್ವಜ ನೆರವೇರಿಸಲಾಗುತ್ತದೆ. ನಂತರ ಸರ್ಕಾರಿ ಕಾರ್ಯಕ್ರಮದಲ್ಲಿ ಎಲ್ಲ ಉಪಾಸಕರು ಭಾಗವಹಿಸುತ್ತೇವೆ. ಸಂಜೆ 6 ಗಂಟೆಗೆ ನಗರದ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬುದ್ಧ ನಗರದ ವರೆಗೆ ಮೌನ ಮೆರವಣಿಗೆ ಮಾಡಲಾಗುತ್ತದೆ.
ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬುದ್ಧ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದ್ದು, ಇದರ ಪ್ರಮುಖ ಉದ್ದೇಶ ಜನರಿಗೆ ಜಾಗೃತಿ ಮೂಡಿಸುವುದು. ಈ ಬಾರಿ ಅದ್ದೂರಿಯಾಗಿ ಬುದ್ಧ ಜಯಂತಿಯನ್ನು ಆಚರಣೆ ಮಾಡುತ್ತಿರುವುದರಿಂದ ಎಲ್ಲಾ ಜನರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ಟ್ರಸ್ಟ್ ಉಪಾಧ್ಯಕ್ಷ ವಾಸುದೇವಮೂರ್ತಿ, ಪ್ರಚಾರ ಸಮಿತಿಯ ಅಧ್ಯಕ್ಷ ಚುಂಚನಹಳ್ಳಿ ಮಲ್ಲೇಶ್, ನಿರ್ದೇಶಕರಾದ ಮಲ್ಲಹಳ್ಳಿ ನಾರಾಯಣ್, ಬುದ್ಧ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಖಜಾಂಚಿ ದಾಸಯ್ಯ, ಮುಖಂಡರಾದ ಚಂದನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

