ಮೈಸೂರು : ವಿದ್ಯುತ್ ಸ್ಪರ್ಶದಿಂದಾಗಿ ಕಾಡಾನೆ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆ ಸಮೀಪ ದೊಡ್ಡಹಾರವೇ ಅರಣ್ಯ ಮೀಸಲು ಪ್ರದೇಶದಲ್ಲಿ ನಡೆದಿದೆ.
ಆಹಾರ ಅರಸಿ ಕಾಡಿನಿಂದ ನಾಡಿನತ್ತ ಹೆಣ್ಣಾನೆ ಮುಖ ಮಾಡಿತ್ತು. ಕಾಡಂಜಿನ ಭಾಗದಲ್ಲಿ ಜಮೀನಿಗೆ ಅಳವಡಿಸಿದ್ದ ಜಿ ಐ ವೈರ್ ಮತ್ತು ಮುಳ್ಳು ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಮಾಡಲಾಗಿತ್ತು.
ರೈತರ ಜಮೀನಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಜಮೀನಿನ ಮಾಲೀಕರ ಮೇಲೆ ಬೈಲಕುಪ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

