ನಂಜನಗೂಡು: ಮಳೆ ಕೊರತೆ, ಬರದ ಬವಣೆ, ಸಾಲದ ಹೊರೆ ನಡುವೆ ಕಷ್ಟಪಟ್ಟು ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದ ರೈತರಿಗೆ ಇದೀಗ ಕಾಡಾನೆಗಳ ದಾಳಿಯೂ ದೊಡ್ಡ ಸಂಕಷ್ಟವಾಗಿ ಪರಿಣಮಿಸಿದೆ. ಕಣ್ಣೆದುರೇ ತಮ್ಮ ಬೆವರು ಸುರಿಸಿ ಬೆಳೆಸಿದ ಬಾಳೆ ಹಾಗೂ ಕುಂಬಳಕಾಯಿ ಬೆಳೆ ನಾಶವಾಗಿರುವುದನ್ನು ಕಂಡ ರೈತರು ಕಣ್ಣೀರಿಟ್ಟ ಘಟನೆ ನಂಜನಗೂಡು ತಾಲ್ಲೂಕಿನ ಹೊಸವೀಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸರ್ವೇ ನಂಬರ್ 48, 38 ಹಾಗೂ 42ರ ಜಮೀನುಗಳಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಬಾಳೆ ಮತ್ತು ಕುಂಬಳಕಾಯಿ ಬೆಳೆಯನ್ನು ನಾಶಪಡಿಸಿದೆ. ಈ ಘಟನೆಯಿಂದ ರೈತರಿಗೆ ಸುಮಾರು ಮೂರು ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿಯಲ್ಲಿಯೂ ಸಾಲ-ಸೋಲ ಮಾಡಿ ರೈತರು ಬೆಳೆ ಬೆಳೆದು ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಒಂದು ಕಡೆ ಪ್ರಕೃತಿಯ ಮುನಿಸು, ಮತ್ತೊಂದು ಕಡೆ ಕಾಡು ಪ್ರಾಣಿಗಳ ಕಾಟ ರೈತರ ಬದುಕನ್ನೇ ಅತಂತ್ರಗೊಳಿಸಿದೆ.

ಒಂದು ಕಡೆ ಹುಲಿಯ ಭಯ, ಮತ್ತೊಂದು ಕಡೆ ಕಾಡುಹಂದಿ ಮತ್ತು ಕಾಡಾನೆಗಳ ಕಾಟ. ಜೀವವನ್ನು ಲೆಕ್ಕಿಸದೆ ರಾತ್ರಿ-ಹಗಲು ಬೆಳೆ ಕಾಯುತ್ತಿದ್ದೇವೆ. ಆದರೂ ಕಾಡು ಪ್ರಾಣಿಗಳು ಬಂದು ನಮ್ಮ ಕಣ್ಣೆದುರೇ ಬೆಳೆ ನಾಶಪಡಿಸಿ ಹೋಗುತ್ತಿವೆ. ನಾವು ಬದುಕುವುದಾದರೂ ಹೇಗೆ? ಎಂದು ರೈತರು ತಮ್ಮ ಅಳಲು ತೋಡಿಕೊಂಡರು.

ಕಾಡಾನೆ ದಾಳಿಯಿಂದ ಜಮೀನುಗಳಿಗೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳ ಎದುರು ರೊಚ್ಚಿಗೆದ್ದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆಗಳು ಗ್ರಾಮ ಮತ್ತು ರೈತರ ಜಮೀನುಗಳಿಗೆ ನುಗ್ಗದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು.

ಮತ್ತೆ ಕಾಡಾನೆಗಳು ದಾಳಿ ಮಾಡಿ ನಮ್ಮ ಬೆಳೆ ನಾಶಪಡಿಸಿದರೆ, ಅರಣ್ಯ ಇಲಾಖೆಯ ಕಚೇರಿ ಮುಂದೆ ವಿಷ ಕುಡಿಯುವುದೊಂದೇ ನಮಗೆ ಉಳಿದಿರುವ ದಾರಿ ಎಂದು ರೈತರು ತಮ್ಮ ನೋವು ಮತ್ತು ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಸಾಲ ಮಾಡಿ ಬೆಳೆದ ಬೆಳೆ ಕಣ್ಣೆದುರೇ ನಾಶವಾಗುತ್ತಿರುವಾಗ ರೈತನ ಬದುಕಿನ ಪ್ರಶ್ನೆ ಮತ್ತಷ್ಟು ಗಂಭೀರವಾಗಿದೆ. ಕೂಡಲೇ ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಮತ್ತು ತ್ವರಿತ ಪರಿಹಾರ ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ.