ನಂಜನಗೂಡು: ತಾಲ್ಲೂಕಿನ ಮಲ್ಲೂಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 2026-27ನೇ ಸಾಲಿನ ದೊಡ್ಡಕವಲಂದೆ ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
1,500 ಮೀಟರ್ ಓಟದಲ್ಲಿ ಅಮೂಲ್ಯ ಕೆ.ಎಸ್. ಪ್ರಥಮ ಸ್ಥಾನ ಪಡೆದುಕೊಂಡರೆ, 100 ಮೀಟರ್ ಓಟದಲ್ಲಿ ಗಗನ ದ್ವಿತೀಯ ಸ್ಥಾನ, 400 ಮೀಟರ್ ಓಟದಲ್ಲಿ ಸೈಯಾದ್ ಸಾರಿಯ ತೃತೀಯ ಸ್ಥಾನ ಪಡೆದಿದ್ದಾರೆ. ಗುಂಡು ಎಸೆತ ಸ್ಪರ್ಧೆಯಲ್ಲಿ ಮಹಮ್ಮದ್ ಹುಸೇನ್ ದ್ವಿತೀಯ ಸ್ಥಾನ, 3000 ಮೀಟರ್ ಓಟದಲ್ಲಿ ಧ್ರುವ ಕುಮಾರ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಗುಂಡು ಎಸೆತದಲ್ಲಿ ಸ್ಪಂದನ ಪ್ರಥಮ ಸ್ಥಾನ, ತಟ್ಟೆ ಎಸೆತ ಸ್ಪರ್ಧೆಯಲ್ಲಿ ತನುಶ್ರೀ ಪ್ರಥಮ ಸ್ಥಾನ ಹಾಗೂ 3000 ಮೀಟರ್ ಓಟದಲ್ಲಿ ರಶ್ಮಿತ ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ರಿಲೇ ಸ್ಪರ್ಧೆಗಳಲ್ಲಿಯೂ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಬಾಲಕಿಯರ 4×400 ಮೀಟರ್ ರಿಲೇಯಲ್ಲಿ ಅಮೂಲ್ಯ, ಗಗನ, ರಶ್ಮಿತಾ ಹಾಗೂ ಸೈಯಾದ್ ಸಾರಿಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬಾಲಕರ 4×100 ಮೀಟರ್ ರಿಲೇಯಲ್ಲಿ ಮಾದೇಶ, ಶಿವು, ಧ್ರುವ ಕುಮಾರ್ ಹಾಗೂ ಮನೀಶ್ ತಂಡ ದ್ವಿತೀಯ ಸ್ಥಾನಗಳಿಸಿದೆ. ಸೈಯಾದ್ ಸಾರಿಯ ಲಾಂಗ್ ಜಂಪ್ ಮತ್ತು 800 ಮೀಟರ್ ನಲ್ಲಿ ತೃತೀಯ ಸ್ಥಾನ ಗಳಿಸಿದರು.
ತಂಡ ಕ್ರೀಡೆಗಳಲ್ಲಿಯೂ ದೊಡ್ಡಕವಲಂದೆ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಬಾಲಕಿಯರ ಕಬಡ್ಡಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರೆ, ಬಾಲಕಿಯರ ವಾಲಿಬಾಲ್ ಹಾಗೂ ಥ್ರೋಬಾಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬಾಲಕರ ಥ್ರೋಬಾಲ್ ತಂಡವೂ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದೆ.
ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕಿ ಟಿ.ಪ್ರೇಮ ಅವರ ಶ್ರಮ ಪ್ರಮುಖವಾಗಿದ್ದು, ಅವರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಉಪ ಪ್ರಾಂಶುಪಾಲರಾದ ಹಸೀನ ತಾಜ್, ದೈಹಿಕ ಶಿಕ್ಷಣ ಶಿಕ್ಷಕಿ ಟಿ.ಪ್ರೇಮ, ಶಿಕ್ಷಕರಾದ ರಘು, ಮಧುಶ್ರೀ, ನಂಜುಂಡಸ್ವಾಮಿ, ವಾಸವಾಂಭ, ಶಶಿಭೂಷಣ್, ಶ್ರೀನಿವಾಸ್, ಕಾರಯ್ಯ, ಸ್ವರಾಜ್ ಸೇರಿದಂತೆ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

