ನಂಜನಗೂಡು: ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ 2024-25ನೇ ಸಾಲಿನಲ್ಲಿ ಸುಮಾರು 4 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಆರೋಪಿಸಿದರು.
ನಂಜನಗೂಡು ನಗರದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಶಾಸಕ ದರ್ಶನ್ ಧ್ರುವನಾರಾಯಣ ಅವರು ದೇವಾಲಯದಲ್ಲಿ ಸಭೆ ನಡೆಸಿ 2024-25ನೇ ಸಾಲಿನಲ್ಲಿ ಸುಮಾರು 4 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು. ಆದರೆ, ಈ ಸಂಬಂಧ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡದೆ ಅನವಶ್ಯಕ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಹೇಳಿದರು.
ರಾಜ್ಯದ ಐದನೇ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆ ಹೊಂದಿರುವ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ವಿರುದ್ಧ ದಾಖಲೆರಹಿತ ಆರೋಪ ಮಾಡುವುದರಿಂದ ಭಕ್ತರ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಜತೆಗೆ ಭವಿಷ್ಯದಲ್ಲಿ ದೇವಾಲಯದ ಆದಾಯದ ಮೇಲೂ ಪರಿಣಾಮ ಬೀರುವ ಆತಂಕವಿದೆ ಎಂದು ತಿಳಿಸಿದರು.
ಶಾಸಕರು ಸೂಕ್ತ ದಾಖಲೆಗಳೊಂದಿಗೆ ತಪ್ಪಿತಸ್ಥರು ಯಾರು ಎಂಬುದನ್ನು ಜನತೆಯ ಮುಂದಿಡಬೇಕು. ಕೇವಲ ಆರೋಪಗಳನ್ನು ಮಾಡುವ ಮೂಲಕ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಆಗ್ರಹಿಸಿದರು.
ಬೆಳ್ಳಿ ರಥ ಯೋಜನೆ ನೆನೆಗುದಿಗೆ: ಶಾಸಕ ದರ್ಶನ್ ಧ್ರುವನಾರಾಯಣ ಅವರು ಬಿಳಿಗಿರಿ ರಂಗನಬೆಟ್ಟದ ದೇವಾಲಯದ ಬಗ್ಗೆ ತೋರುವ ಕಾಳಜಿಯನ್ನು ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಬಗ್ಗೆ ತೋರುತ್ತಿಲ್ಲ ಎಂದು ಹರ್ಷವರ್ಧನ್ ಟೀಕಿಸಿದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ಜಾರಿಗೊಳಿಸಲು ಮುಂದಾಗಿದ್ದ ಬೆಳ್ಳಿ ರಥ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಸದ್ಯ ಮಾರುಕಟ್ಟೆಯಲ್ಲಿ ಬೆಳ್ಳಿ ದರ ದುಪ್ಪಟ್ಟಾಗಿರುವುದರಿಂದ ದೇವಾಲಯಕ್ಕೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗುವ ಸಾಧ್ಯತೆಯಿದೆ ಎಂದರು.
ಭಕ್ತರ ಅನುಕೂಲಕ್ಕಾಗಿ 75 ಕೊಠಡಿಗಳ ವಸತಿಗೃಹ ನಿರ್ಮಾಣಕ್ಕೆ ಅಗತ್ಯ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಆದರೆ, ಈ ಯೋಜನೆಯನ್ನು ಜಾರಿಗೊಳಿಸದೆ ತಡೆಹಿಡಿಯುವ ಮೂಲಕ ದೇವಾಲಯದ ಪ್ರಗತಿಗೆ ಅಡ್ಡಿಯಾಗಲಾಗಿದೆ ಎಂದು ಆರೋಪಿಸಿದರು.
ಅಲ್ಲದೆ ದೇವಾಲಯದಲ್ಲಿ ಪುರಾತತ್ವ ಇಲಾಖೆಯ ಅನುಮತಿ ಇಲ್ಲದೆ ಶೌಚಾಲಯ ಕಟ್ಟಡವನ್ನು ಕೆಡವಿ ಕಾರ್ಯನಿರ್ವಹಣಾಧಿಕಾರಿಗಳ ಕಛೇರಿಯಾಗಿ ಪರಿವರ್ತಿಸಲಾಗಿದೆ. ಕೇವಲ ನಿರ್ಮಿತಿ ಕೇಂದ್ರದ ಮೂಲಕವೇ ಎಲ್ಲಾ ಕಾಮಗಾರಿಗಳನ್ನು ನೀಡಿ ಅವರ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಲಾಗುತ್ತಿದೆ ಎಂದು ದೂರಿದರು.
2026ನೇ ಸಾಲಿನಲ್ಲಿ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಲ್ಲಿ ಎಸಿ ಅಳವಡಿಸಿರುವುದಾಗಿ ಬಿಲ್ ಮಾಡಲಾಗಿದೆ. ಆದರೆ, ವಾಸ್ತವದಲ್ಲಿ ಎಸಿ ಯಂತ್ರವನ್ನೇ ಅಳವಡಿಸಿಲ್ಲ ಎಂದು ಆರೋಪಿಸಿದ ಅವರು, 2026ರಲ್ಲಿ ನಡೆದಿರುವ ಆರೋಪಿತ ಅವ್ಯವಹಾರವನ್ನು ಮುಚ್ಚಿಹಾಕಲು ಶಾಸಕರು ಅಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
2024ರಲ್ಲಿ ನಂಜನಗೂಡು ನಗರಸಭೆಯಲ್ಲಿ ನಗರೋತ್ಥಾನ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತ ತನಿಖೆಗೆ ಶಿಫಾರಸು ಮಾಡುವುದಾಗಿ ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದ್ದರು. ಆದರೆ, ಎರಡು ವರ್ಷಗಳಾದರೂ ಈ ಕುರಿತು ಯಾವುದೇ ತನಿಖೆಗೆ ಮುಂದಾಗಿಲ್ಲ. ಈ ಬಗ್ಗೆ ಶಾಸಕರೇ ಜನತೆಗೆ ಉತ್ತರ ನೀಡಬೇಕು ಎಂದು ಹರ್ಷವರ್ಧನ್ ಆಗ್ರಹಿಸಿದರು.
ಪ್ರವಾಸಿ ಮಂದಿರ ಕಛೇರಿ ಎಂದ ಮಾಜಿ ಎಂಎಲ್ಎ: ನಂಜನಗೂಡು ನಗರದ ಸರ್ಕಾರಿ ಪ್ರವಾಸಿ ಮಂದಿರವನ್ನು ಕಾಂಗ್ರೆಸ್ ಪಕ್ಷದ ಕಛೇರಿಯ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಂಜನಗೂಡಿಗೆ ಆಗಮಿಸಿದ್ದ ವೇಳೆ ಪ್ರವಾಸಿ ಮಂದಿರಕ್ಕೆ ಬೀಗ ಹಾಕಲಾಗಿತ್ತು. ಕಳೆದ ತಿಂಗಳು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಪತ್ನಿ ನಂಜನಗೂಡಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿದ್ದ ಕಾರಣ ಅವರಿಗೆ ವಸತಿ ಸೌಲಭ್ಯ ಲಭ್ಯವಾಗಲಿಲ್ಲ ಎಂದು ದೂರಿದರು.
ಗಣ್ಯರ ಬಳಕೆಗೂ ಅವಕಾಶ ನೀಡದೆ ಸರ್ಕಾರಿ ಪ್ರವಾಸಿ ಮಂದಿರವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಪ್ರತಿವರ್ಷ ಪೀಠೋಪಕರಣಗಳನ್ನು ಖರೀದಿಸುವ ಮೂಲಕ ಪ್ರವಾಸಿ ಮಂದಿರವನ್ನು ಪೀಠೋಪಕರಣಗಳ ಶೋರೂಮ್‌ನಂತೆ ಪರಿವರ್ತಿಸಲಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಸಿ. ಚಿಕ್ಕರಂಗ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಘಟಕದ ಅಧ್ಯಕ್ಷ ಸಿದ್ದರಾಜು, ನಗರಸಭೆ ಮಾಜಿ ಸದಸ್ಯ ಮಹದೇವ ಪ್ರಸಾದ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಿದ್ದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

