ಮಂಗಳೂರು: ಶ್ರೀ ಕೃಷ್ಣಾಷ್ಟಮಿ ಅಂಗವಾಗಿ ನಗರದ ಹಂಪನಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಫಟ್‌ಪಾತ್‌ಗಳಲ್ಲಿ ಹೂವಿನ ಮಾರಾಟ ನಡೆಸುವ ದೂರದ ಊರುಗಳ ವ್ಯಾಪಾರಿಗಳಿಗೆ ಮನಪಾದ ಕಟ್ಟುನಿಟ್ಟಿನ ನಿಯಮದಿಂದಾಗಿ ಸಮಸ್ಯೆ ಉಂಟಾಗಿದೆ.

ಇತ್ತೀಚಿನ ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಫೂಟ್‌ಪಾತ್‌ಗಳಲ್ಲಿ ವ್ಯಾಪಾರ ನಡೆಸುವ ಸಣ್ಣ ಸಣ್ಣ ವ್ಯಾಪಾರಿಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಹಬ್ಬದ ಅಂಗವಾಗಿ ದೂರದ ಊರುಗಳಿಂದ ವ್ಯಾಪಾರಕ್ಕೆ ಹೂವು ಹೊತ್ತು ತಂದ ಹೂವಿನ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಸಾಧ್ಯವಾಗಲಿಲ್ಲ.

ಸ್ಥಳೀಯರು ನೀಡಿದ ದೂರಿನಂತೆ ಮನಪಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ವ್ಯಾಪಾರಿಗಳನ್ನು ತೆರವುಗೊಳಿಸಿದರೆನ್ನಲಾಗಿದೆ.

ದೂರದ ಹಾಸನ, ಮಂಡ್ಯ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಹೂವಿನ ಬೆಳೆಗಾರರು, ವ್ಯಾಪಾರಿಗಳು ಪ್ರತಿವರ್ಷ ಚೌತಿ, ನಾಗರ ಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ವಿಜಯದಶಮಿ ಮತ್ತಿತರ ಹಬ್ಬಗಳ ಸಮಯದಲ್ಲಿ ಮಂಗಳೂರಿಗೆ ಆಗಮಿಸಿ ಒಂದೆರಡು ದಿನ ಹೂವಿನ ಮಾರಾಟ ನಡೆಸಿ ವಾಪಸಾಗುತ್ತಾರೆ. ಆದರೆ ಈ ಬಾರಿ ಅಷ್ಟಮಿಯ ಮುನ್ನಾದಿನ ಹೂವಿನ ಮಾರಾಟಕ್ಕೆ ಆಗಮಿಸಿದ ಹೂವಿನ ವ್ಯಾಪಾರಿಗಳಿಗೆ ಆಘಾತ ಉಂಟಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಗುರುವಾರ ಹಂಪನಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫುಟ್ಟಾಪಾತ್‌ಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದರು.

ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಫುಟ್ಬಾತ್‌ಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳದಿಂದ ತೆರವುಗೊಳಿಸಲಾಯಿತು. ಫುಟ್ಬಾತ್‌ಗಳ ಸಾರ್ವಜನಿಕರ, ವಿಶೇಷವಾಗಿ ಪಾದಚಾರಿಗಳ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಮೀಸಲಾಗಿ ರುವುದರಿಂದ ಯಾವುದೇ ರೀತಿಯ ಅಕ್ರಮ ಒತ್ತುವರಿಯನ್ನು ಸಹಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.