ಸರಗೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಎರಡು ಮನೆಗಳು ಕುಸಿದು ಬಿದ್ದಿರುವ ಘಟನೆ ತಾಲೂಕಿನ ಹಳೆಯೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹಳೆಯೂರು ಗ್ರಾಮದ ನಿವಾಸಿ ಚಿಕ್ಕಮ್ಮ ಎಂಬುವರಿಗೆ ಸೇರಿದ ಮನೆ ಕುಸಿದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮನೆಯಲ್ಲಿದ್ದ ದಿನಬಳಕೆ ವಸ್ತುಗಳು ಸಾಕಷ್ಟು ನಾಶವಾಗಿದೆ.
ಈ ಸಂಬಂಧ ಮನೆ ಮಾಲೀಕರಾದ ಚಿಕ್ಕಮ್ಮ ಮಾತನಾಡಿ, ನಾವು ಬಡವರಾಗಿದ್ದು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಮಳೆಯಿಂದಾಗಿ ನಮ್ಮ ಮನೆ ಕುಸಿದಿದೆ, ನಮಗೆ ವಾಸಿಸಲು ಮನೆ ಇಲ್ಲ. ಹಾಗಾಗಿ ಸರ್ಕಾರ ನಮಗೆ ಸೂರು ಕಟ್ಟಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಹಳೆಯೂರು ಗ್ರಾಮದ ನಿವಾಸಿ ಜವರಯ್ಯ ಎಂಬುವರಿಗೆ ಸೇರಿದ ಮನೆ ಕುಸಿದಿದ್ದು, ಮನೆಯಲ್ಲಿದ್ದ ಕೆಲವು ವಸ್ತುಗಳು ನಾಶವಾಗಿವೆ. ಆದರೆ ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆ ಮಾಲೀಕ ಜವರಯ್ಯ ಮಾತನಾಡಿ ಮಳೆಯಿಂದಾಗಿ ನಮ್ಮಮನೆ ಕುಸಿದಿದೆ. ನಾವು ವಾಸ ಮಾಡಲು ಮನೆ ಇಲ್ಲದ್ದರಿಂದ ಸರ್ಕಾರ ನಮಗೆ ಸೂರು ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಮನೆ ಕುಸಿದಿರುವ ಸ್ಥಳಕ್ಕೆ ಗ್ರಾಮಲೆಕ್ಕಿಗರಾದ ಹೇಮಂತ್ ರವರು ಮತ್ತು ಸಿಬ್ಬಂದಿ ವರ್ಗ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.