ನಂಜನಗೂಡು: ಖಾಸಗಿ ವ್ಯಕ್ತಿ ಓಡಾಡುವ ರಸ್ತೆ ಒತ್ತುವರಿ ಮಾಡಿಕೊಂಡ ಪರಿಣಾಮ 25 ಕ್ಕೂ ಹೆಚ್ಚು ಕುಟುಂಬ ಅತಂತ್ರಕ್ಕೆ ಸಿಲುಕಿದೆ. ರಸ್ತೆ ಒತ್ತುವರಿ ತೆರುವುಗೊಳಿಸುವಂತೆ ನ್ಯಾಯಾಲಯ ಹಾಗೂ ತಹಶೀಲ್ದಾರ್ ಆದೇಶಿಸಿದ್ದರೂ ಸಡ್ಡು ಹೊಡೆದ ವ್ಯಕ್ತಿ ಬಂದ್ ಮಾಡುವ ಮೂಲಕ ನಿವಾಸಿಗಳಿಗೆ ಕಿರುಕುಳ ನೀಡುತ್ತಿರುವ ಪ್ರಕರಣವೊಂದು ನಂಜನಗೂಡಿನ ದೇವರಾಯಶೆಟ್ಟಿಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಓಡಾಡಲು ರಸ್ತೆ ಬಿಡದಿದ್ದಲ್ಲಿ ಸಾಮೂಹಿಕವಾಗಿ ಗ್ರಾಮವನ್ನೇ ತೊರೆಯಲು ನಿರ್ಧರಿಸಿದ್ದಾರೆ. ನಂಜನಗೂಡು ದೇವರಾಯಶೆಟ್ಟಿಪುರ ಸರ್ವೆ ನಂ 32/1 ಖಾಸಗಿ ವ್ಯಕ್ತಿಯ ಸ್ವಾಧೀನದಲ್ಲಿದೆ. ಗ್ರಾಮದ ಸುಮಾರು 25 ಕ್ಕೂ ಹೆಚ್ಚು ಕುಟುಂಬಕ್ಕೆ ಇದೇ ಸರ್ವೆ ನಂ ಮೂಲಕ ಹಾದುಹೋಗುವ ರಸ್ತೆ ಇದೆ. ಸುಮಾರು ಹತ್ತು ಅಡಿ ಅಗಲದ ರಸ್ತೆಯನ್ನ ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡ ಪರಿಣಾಮ ಅಲ್ಲಿನ ನಿವಾಸಿಗಳಿಗೆ ಓಡಾಡಲು ತೊಂದರೆಯಾಗಿದೆ.

ಈ ಬಗ್ಗೆ ನಿವಾಸಿಗಳು ತಹಶೀಲ್ದಾರ್ ಮೊರೆ ಹೋದಾಗ ಖಾಸಗಿ ವ್ಯಕ್ತಿ ಹಾಗೂ ನಿವಾಸಿಗಳ ನಡುವೆ ಒಪ್ಪಂದವಾಗಿದೆ. ತಲಾ 5 ಸಾವಿರದಂತೆ 20 ಕುಟುಂಬಗಳಿಂದ 80 ಸಾವಿರ ನೀಡಿದ್ದಾರೆ. ತಹಶೀಲ್ದಾರ್ ಹಾಗೂ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಒಪ್ಪಂದವಾಗಿ ವ್ಯಕ್ತಿ ಪತ್ರವನ್ನೂ ಬರೆದುಕೊಟ್ಟಿದ್ದಾನೆ. ಕೆಲವು ದಿನಗಳು ಓಡಾಡಲು ಅನುಮತಿ ನೀಡಿ ನಂತರ ಕ್ಯಾತೆ ತೆಗೆದಿದ್ದಾನೆ. ಈ ಸಂಬಂಧ ನಿವಾಸಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಮಾಡದಂತೆ ತೆರುವುಗೊಳಿಸುವಂತೆ ಆದೇಶಿಸಿದೆ.

ನ್ಯಾಯಾಲಯದ ಆದೇಶದಂತೆ ತಹಶೀಲ್ದಾರ್ ರವರೂ ಸಹ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗೆ ತುರ್ತು ಪತ್ರ ಬರೆದಿದ್ದಾರೆ. ಎಲ್ಲಾ ಆದೇಶಗಳಿಗೆ ಸಡ್ಡುಹೊಡೆದ ವ್ಯಕ್ತಿ ಒತ್ತುವರಿ ಮಾಡಿಕೊಂಡು ದರ್ಪ ತೋರಿಸುತ್ತಿದ್ದಾನೆ.

ಈ ಸಂಬಂಧ ಇಬ್ಬರ ನಡುವೆ ಮಾತಿನಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಒಪ್ಪಂದದಂತೆ ಹಣ ಪಡೆದ ವ್ಯಕ್ತಿ ಯೂ ಟರ್ನ್ ಹೊಡೆದು ನಿವಾಸಿಗಳಿಗೆ ತೊಂದರೆ ಕೊಡುತ್ತಿದ್ದಾನೆ. ಇದೀಗ ಖಾಸಗಿ ವ್ಯಕ್ತಿ ಹೈಕೋರ್ಟ್ ಮೆಟ್ಟಿಲೇರಿದ್ದಾನಂತೆ. ಓಡಾಡಲು ರಸ್ತೆ ಇಲ್ಲದೆ ಹೈರಾಣರಾಗಿರುವ ನಿವಾಸಿಗಳು ತಮಗೆ ನ್ಯಾಯ ಸಿಗದೇ ಇದ್ದಲ್ಲಿ ಗ್ರಾಮವನ್ನೇ ತೊರೆಯಲು ನಿರ್ಧಾರ ಮಾಡಿದ್ದಾರೆ. ಇನ್ನಾದ್ರೂ ತಾಲ್ಲೂಕು ಆಡಳಿತ ಮಧ್ಯೆ ಪ್ರವೇಶಿಸಿ ಅಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಸಬೇಕಿದೆ.