ನಂಜನಗೂಡು: ಪ್ರತಿ ಗ್ರಾಮಗಳ ಮಟ್ಟದಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ತಮ್ಮ ವಾರ್ಡ್ಗಳ ಮತ ಪಟ್ಟಿಗಳನ್ನು ಪರಿಷ್ಕರಣೆ ಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಹೇಳಿದರು.

ನಂಜನಗೂಡು ನಗರದ ಯಾತ್ರಿ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಬಿಎಲ್ಎ -2 ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಬೂತ್ ನಲ್ಲಿ ಎಲ್ಲರೂ ಶ್ರಮಿಸಬೇಕು. ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಕೊರತೆ ಇಲ್ಲ. ನಂಜನಗೂಡು ಕ್ಷೇತ್ರ ಈಗ ಬದಲಾಗಿದೆ. ದೇಶಕ್ಕೆ ವಲಸಿಗರು ಬರುತ್ತಿದ್ದಾರೆ. ಕೋಟಿಗಟ್ಟಲೆ ನಕಲಿ ಮತದಾರರ ಗುರುತಿನ ಚೀಟಿಗಳು ಆಗುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸಬೇಕು.

ಪ್ರಶಿಕ್ಷಣದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ನಂಜನಗೂಡು ಕ್ಷೇತ್ರದಲ್ಲಿ ಈಗ ಬದಲಾಗಿದೆ. ಮುಂಬರುವ ಜಿ.ಪಂ ಮತ್ತು ತಾ.ಪಂ, ಗ್ರಾ.ಪಂ ಚುನಾವಣೆಗೆ ನಾವು ಸಿದ್ದರಿದ್ದೇವೆ. ಇನ್ನೆರಡು ತಿಂಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದೆ. ಉಪ ಚುನಾವಣೆಯ ನೆಪವನ್ನು ಹೊಡ್ಡಿದ್ದಾರೆ. ಚುನಾವಣೆ ಫಲಿತಾಂಶ ಬರುವುದಕ್ಕಿಂತ ಮುಂಚೆ ಸಿಎಂ ಬದಲಾವಣೆ ಆಗಲಿದೆ. ಮರಗಳ ಮಾರಣಹೋಮ ನಡೆದಿರುವುದು ವರುಣ ಕ್ಷೇತ್ರದಲ್ಲಿ ನಾವು ಶಾಸಕರಾಗಿದ್ದ ಸಂದರ್ಭದಲ್ಲಿ ರಸ್ತೆ ಡಾಂಬರೀಕರಣ ಮಾಡುವ ವೇಳೆಯಲ್ಲಿಯೂ ಮರಗಳನ್ನು ತೆರವುಗೊಳಿಸಿಲ್ಲ. ಒಂದು ಮರವನ್ನು ಬೆಳೆಸಲು 30 ವರ್ಷ ಸಮಯ ಬೇಕು.ಆದರೆ, ಕಡಿಯಲು ಒಂದು ಗಂಟೆ ಸಾಕು. ಮರಗಳನ್ನು ಕಟಾವು ಮಾಡಿರುವ ಕಿಡಿಗೇಡಿಗಳಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. ಒಳ ಮೀಸಲಾತಿ ಹೋರಾಟಕ್ಕೆ ನಾನು ಬೆಂಬಲವನ್ನು ವ್ಯಕ್ತಪಡಿಸುತ್ತೇನೆ.

ಒಳ ಮೀಸಲಾತಿ ವಿಚಾರವಾಗಿ ಅಂದಿನ ದಿನದಲ್ಲಿ ದಿವಂಗತ ವಿ.ಶ್ರೀನಿವಾಸ್ ಪ್ರಸಾದ್ ರವರು ಸಂವಿಧಾನದಲ್ಲಿ ಮೀಸಲಾತಿ ಇದೆ. ಆದರೆ, ಒಳ ಮೀಸಲಾತಿ ಇಲ್ಲ ಎಂದು ಹೇಳಿದ್ದರು. ಸುಪ್ರೀಂ ಕೋರ್ಟ್ ಹೇಳಿರುವುದು ಒಳ ಮೀಸಲಾತಿ ಮಾಡಲು ಅವಕಾಶ ಇದೆ ಅಂತ ಹೇಳಿದೆ ಹೊರತು ಅದನ್ನು ಮಾಡಿ ಎಂದು ಹೇಳಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ನಾವು ಮೀಸಲಾತಿಯನ್ನು ಹೆಚ್ಚಳ ಮಾಡಿ ಎಂದು ಕೇಳಿಕೊಂಡಿದ್ದೆವು. ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರ ಎಡವಿದೆ. ಒಂದೊಂದು ಅನಾಹುತಗಳನ್ನು ಮಾಡಿಕೊಂಡು ಬಂದು ಸಮುದಾಯಗಳನ್ನು ಹೊಡೆದು ಹಾಕಿದೆ. ಒಳ ಮೀಸಲಾತಿಯಿಂದ ಸಾಕಷ್ಟು ಸಮುದಾಯಗಳಿಗೆ ಅನ್ಯಾಯವಾಗಲಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ವರದಿಯನ್ನು ಸರ್ಕಾರ ತಿರುಚಿದೆ ಎಂದು ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಗರ ಬಿಜೆಪಿ ಅಧ್ಯಕ್ಷ ಎಸ್.ಸಿದ್ದರಾಜು ಮಾತನಾಡಿ, ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರು ತಮ್ಮ ವಾರ್ಡಿನ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕು. ನಕಲಿ ಮತದಾರರ ಗುರುತಿನ ಚೀಟಿಗಳು ಬರುತ್ತಿರುವುದರಿಂದ ಎಚ್ಚರಿಕೆಯಿಂದ ನಿಗಾವಹಿಸಿ ಕೆಲಸ ಮಾಡಬೇಕು. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬೇಕು ಹಾಗಾಗಿ ಕಾರ್ಯಕರ್ತರು ಉತ್ತಮವಾದ ಕೆಲಸವನ್ನು ಮಾಡಿ ಪಕ್ಷದ ಏಳಿಗೆಗೆ ದುಡಿಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಗೌಡ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕೆಂಡಗಣಪ್ಪ, ಮಾಜಿ ಜಿಪಂ ಸದಸ್ಯೆ ಮಂಗಳಸೋಮಶೇಖರ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ, ಬಿಜೆಪಿ ನಗರಾಧ್ಯಕ್ಷ ಸಿದ್ದರಾಜು, ಹೆಮ್ಮರಗಾಲ ಸೋಮಣ್ಣ, ಮಹದೇವಸ್ವಾಮಿ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.