ನಂಜನಗೂಡು: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ಬೆಂಬಲಿಸುತ್ತೇವೆ. ಬೀದರ್ ಜಿಲ್ಲೆಯಲ್ಲಿ ನಡೆದಿರುವ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ದಸಂಸ ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್ ಹೇಳಿದರು.

ನಂಜನಗೂಡು ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 75 ವರ್ಷಗಳ ಸ್ವಾತಂತ್ರ ಭಾರತದಲ್ಲಿ ಈ ನೆಲದ ಮೂಲ ನಿವಾಸಿಗಳ ಬದುಕು ಮತ್ತು ಭವಣೆಗಳು ಇಂದಿಗೂ ಶೋಚನೀಯ. ದಲಿತ ಸಮುದಾಯಗಳು ವಾಸಿಸುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಒಂದು ಕಡೆಯಾದರೆ, ಸೌಲಭ್ಯಗಳನ್ನು ಉಪಯೋಗಿಸದಂತೆ ಮೇಲ್ವರ್ಗದವರ ದೌರ್ಜನ್ಯ, ಇವೆರಡರ ನಡುವೆ ದಲಿತ ಹೆಣ್ಣು ಮಕ್ಕಳ ಮೇಲಿನ ನಿರಂತರ ದೌರ್ಜನ್ಯ ಮತ್ತು ಅತ್ಯಾಚಾರ ಹಾಗೂ ಹತ್ಯಾಗಳು ಈ ದೇಶದ ಶೋಷಿತ ಸಮುದಾಯಗಳ ಮನಸ್ಸನ್ನು ಕಂಗೇಡಿಸಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅರೆಬೆಳಚಿ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದ ಕಾಲೋನಿಯಲ್ಲಿ ವಾಸ ಮಾಡುತ್ತಿರುವ ದಲಿತ ಸಮುದಾಯದವರು ತಿರುಗಾಡುವ ರಸ್ತೆಯನ್ನು ಸವರ್ಣಿಯರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರಸ್ತೆ ಸಂಪರ್ಕವನ್ನು ನಿರ್ಬಂಧಿಸಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಶಿವಮೊಗ್ಗ ಜಿಲ್ಲಾ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ರು, ಒತ್ತುವರಿ ಮಾಡಿಕೊಂಡಿರುವ ರಸ್ತೆಯನ್ನು ತಿರುವುಗೊಳಿಸದೆ ಇರುವುದನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಸಮಿತಿಯೂ ರಸ್ತೆ ತೆರವುಗೊಳಿಸುವ ವರೆಗೂ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ಧರಣಿಯು 5ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಸಂಬಂಧಪಟ್ಟ ಯಾವ ಅಧಿಕಾರಿಯೂ ಧರಣಿ ನಿರತರನ್ನು ಭೇಟಿ ಮಾಡಿ ಕ್ರಮ ಕೈಗೊಂಡಿಲ್ಲ. ಇಂತಹ ಬೇಜವಾಬ್ದಾರಿಯುತ ಅಧಿಕಾರಿಗಳು ಹಾಗೂ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರ ಮತ್ತು ಶಿವಮೊಗ್ಗ ಜಿಲ್ಲಾ ಆಡಳಿತ ಹಾಗೂ ಭದ್ರಾವತಿ ತಾಲ್ಲೂಕು ಆಡಳಿತದ ವ್ಯವಸ್ಥೆಯನ್ನು ನಂಜನಗೂಡು ತಾಲ್ಲೂಕು ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಹೋರಾಟವನ್ನು ನಾವು ಬೆಂಬಲಿಸುತ್ತೇವೆ.

ಕೂಡಲೇ ಸರ್ಕಾರ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಹಾಗೆಯೇ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಬೆಳಕುಣಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಪ್ರತಿಭಾನ್ವಿತ ವಿದ್ಯಾರ್ಥಿನಿ ರಾಜ್ಯಮಟ್ಟದ ಕಬ್ಬಡಿ ಆಟಗಾರ್ತಿ ಶೋಭಾ ಎನ್ನುವ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿರುವ ದಸಂಸ, ಆರೋಪಿಯನ್ನು ಕಾನೂನಿನಿಂದ ತಪ್ಪಿಸಿಕೊಳ್ಳದ ರೀತಿಯಲ್ಲಿ ಆತನಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ತಾಲ್ಲೂಕು ಸಂಚಾಲಕರಾದ ಗಟ್ಟವಾಡಿ ಮಹೇಶ್, ಪಟ್ಟಣ ಸಂಚಾಲಕರಾದ ಲೋಕೇಶ್ ಶ್ರೀರಾಂಪುರ, ತಾಲ್ಲೂಕು ಸಂಘಟನಾ ಸಂಚಾಲಕರಾದ ಗೋಣಹಳ್ಳಿ ನಾರಾಯಣ, ಹೂವಯ್ಯ, ಬ್ಯಾಳಾರು ಆನಂದ್, ವಿದ್ಯಾರ್ಥಿ ಒಕ್ಕೂಟ ತಾಲ್ಲೂಕು ಸಂಚಾಲಕ ಮಲ್ಲಹಳ್ಳಿ ಆದರ್ಶ್ ಹಾಜರಿದ್ದರು.