ನಂಜನಗೂಡು: ಬಡವರ ಪರ ಕಾಳಜಿ ವಹಿಸಿ ಪಶು ಇಲಾಖೆಯಿಂದ ಬರುವ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸಿ ಅವರನ್ನು ಬಡತನದ ರೇಖೆಯಿಂದ ಮೇಲೆತ್ತಬೇಕು ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ನಾಗರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

ನಂಜನಗೂಡು ನಗರದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆಯಲ್ಲಿ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿದರು‌. ನಿವೃತ್ತಿ ಹೊಂದಿದ ಅಧಿಕಾರಿಗಳಿಗೆ ಸನ್ಮಾನಿಸಿ, ಮಾತನಾಡಿದ ಅವರು, ನಂಜನಗೂಡು ತಾಲ್ಲೂಕು ಜ್ಞಾನದ ಕಣಜವಾಗಿದೆ. ಇಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ಸಂತೋಷವಾಗುತ್ತದೆ. ಇದೇ ತಿಂಗಳು ನನಗೆ ನಿವೃತ್ತಿಯಾಗುತ್ತಿದೆ. ನನ್ನ ಸೇವಾ ಅವಧಿಯಲ್ಲಿ ಹಂತ ಹಂತವಾಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ.

ಸಿಬ್ಬಂದಿಗಳ ಸಹಕಾರ ಶ್ರಮದಿಂದ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದ ಅವರು, ರಾಜಕೀಯ ನಾಯಕರ ಸಹಕಾರದಿಂದ ಇಲಾಖೆಯನ್ನು ಹೆಚ್ಚು ಹೆಚ್ಚು ಅಭಿವೃದ್ಧಿಪಡಿಸಲು ಸಹಾಯವಾಗಿದ್ದು, ಈ ಭಾಗದ ರಾಜಕೀಯ ನಾಯಕರಗಳಾದ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಪಶು ಸಂಗೋಪನೆಯ ಇಲಾಖೆಯ ಸಚಿವರು, ಸಂಸದರು ಹಾಗೂ ಶಾಸಕರು ನಮಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡಿದ್ದಾರೆ.

ರೈತರಿಗೆ ಹೈನುಗಾರಿಕೆ ಮಾಡಲು ಉತ್ತೇಜನ ನೀಡಬೇಕು. ನೊಂದವರ, ಬಡವರ, ಹಸಿದವರ ಪರ ಕಾಳಜಿ ವಹಿಸಬೇಕು. ಮಾನವೀಯತೆಯ ನೆಲೆಯಿಂದ ಸೇವೆ ಸಲ್ಲಿಸಬೇಕು. ಕುರಿಗಾಹಿಗಳನ್ನು ಮಾನವೀಯತೆಯ ದೃಷ್ಟಿಯಿಂದ ನೋಡಬೇಕು. ಅಲ್ಲದೆ ನನ್ನ ಸೇವಾ ಅವಧಿಯಲ್ಲಿ ಎಲ್ಲಾ ಸಿಬ್ಬಂದಿಗಳು ಸಹಕಾರ ನೀಡಿದರು ಎಂದು ತಿಳಿಸಿದರು.

ನಂತರ ನಂಜನಗೂಡು ಪಶು ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಮಾತನಾಡಿ, ಸಹಾಯಕ ನಿರ್ದೇಶಕರ ಒಡನಾಟ ಬಹಳ ಅನನ್ಯವಾಗಿದೆ. ಸಾಮಾಜಿಕ ಹೋರಾಟ ಮತ್ತು ಚಿಂತನೆ ಬಹಳ ಮುಖ್ಯವಾಗಿದ್ದು, ಜನಪರ ಕೆಲಸಗಳ ಬಗ್ಗೆ ಕಾಳಜಿ ವಹಿಸಿರುವುದು ಅಧಿಕಾರಿಗಳ ಕರ್ತವ್ಯ. ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಯಾಗುತ್ತಿರುವ ಅಧಿಕಾರಿಗಳನ್ನು ಸನ್ಮಾನಿಸಿ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕೆಲಸವಾಗಿದೆ. ಇಲಾಖೆಗಳಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬಂದಿರುವ ಅಧಿಕಾರಿಗಳ ಕಾರ್ಯವೈಕರಿ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಇಲಾಖೆಯ ನಿರ್ದೇಶಕ ಶ್ರೀಧರ ಮೂರ್ತಿ, ಅಧಿಕಾರಿಗಳಾದ ಡಾ.ಶರಣ ಬಸಪ್ಪ, ಡಾ. ಕೃಷ್ಣಪ್ಪ, ಡಾ.ಲಿಂಗರಾಜು, ಡಾ.ಮುತ್ತುರಾಜು ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.