ನಂಜನಗೂಡು: ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ಪಂಪ್‌ಸೆಟ್‌ಗಳು ಕಾರ್ಯನಿರ್ವಹಿಸದೇ ಕಬ್ಬು ಬೆಳೆ ಒಣಗುತ್ತಿರುವ ಘಟನೆ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಹೋಬಳಿಯ ಕೃಷ್ಣರಾಜಪುರ ಗ್ರಾಮದಲ್ಲಿ ನಡೆದಿದೆ. ಕೂಡಲೇ ಹೆಚ್ಚುವರಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸದಿದ್ದರೆ ಕೆ.ಆರ್.ಪುರದಿಂದ ಬದನವಾಳು ಚೆಸ್ಕಾಂ ಕಛೇರಿವರೆಗೆ ಪಾದಯಾತ್ರೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಕೃಷ್ಣರಾಜಪುರ ಗ್ರಾಮದ ರೈತರ ಜಮೀನುಗಳಿಗೆ ವಿದ್ಯುತ್ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಪರಿಣಾಮ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೆ ಸುಮಾರು 15ರಿಂದ 20 ಎಕರೆ ಪ್ರದೇಶದಲ್ಲಿ ಬೆಳೆದಿರುವ ಕಬ್ಬು ಬೆಳೆ ಒಣಗುತ್ತಿದೆ ಎಂದು ರೈತರು ಸಂಕಷ್ಟ ತೋಡಿಕೊಂಡಿದ್ದಾರೆ.

ಚುಂಚನಹಳ್ಳಿ ರಸ್ತೆಯಲ್ಲಿ 63 ಕೆವಿ ಸಾಮರ್ಥ್ಯದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದ್ದು, ಸಾಮಾನ್ಯವಾಗಿ ಏಳು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುವ ಟ್ರಾನ್ಸ್‌ಫಾರ್ಮರ್‌ಗೆ 13 ಪಂಪ್‌ಸೆಟ್‌ಗಳ ಸಂಪರ್ಕ ನೀಡಲಾಗಿದೆ. ಇದರಿಂದ ಟ್ರಾನ್ಸ್‌ಫಾರ್ಮರ್ ಓವರ್‌ಲೋಡ್ ಆಗಿ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ರೈತರು ದೂರಿದ್ದಾರೆ.

ವಿದ್ಯುತ್ ಪೂರೈಕೆಯಾದರೂ ನಿರಂತರವಾಗಿ ಎರಡು ಗಂಟೆಗಳ ಕಾಲ ಪಂಪ್‌ಸೆಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಪದೇ ಪದೇ ವಿದ್ಯುತ್ ಕಡಿಮೆಯಾಗುತ್ತಿರುವುದರಿಂದ ಡ್ರಿಪ್ ಆಗುತ್ತಿದೆ, ನೀರಿಲ್ಲದೆ ಕಬ್ಬು ಬೆಳೆ ಒಣಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದರೂ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ, ಸರ್ಕಾರದಲ್ಲಿ ಹಣವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಒಂದು ಟ್ರಾನ್ಸ್‌ಫಾರ್ಮರ್‌ಗೆ ಎಷ್ಟು ಸಂಪರ್ಕ ನೀಡಬೇಕು ಎಂಬುದು ಅಧಿಕಾರಿಗಳಿಗೆ ತಿಳಿದಿಲ್ಲವೇ ಎಂದು ರೈತರು ಪ್ರಶ್ನಿಸಿದ್ದಾರೆ.

ರೈತರು ಅಗತ್ಯ ಹಣ ಪಾವತಿಸಿದ್ದರೂ ಹೊಸ ಟ್ರಾನ್ಸ್‌ಫಾರ್ಮರ್ ತಂದು ಅಳವಡಿಸಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಪುಟ್ಟಬುದ್ಧಿ ಆರೋಪಿಸಿದರು.

ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಅಳವಡಿಸಿ ರೈತರ ಜಮೀನುಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಕೆ.ಆರ್.ಪುರದಿಂದ ಬದನವಾಳು ಚೆಸ್ಕಾಂ ಕಛೇರಿವರೆಗೆ ಪಾದಯಾತ್ರೆ ನಡೆಸುವುದರ ಜೊತೆಗೆ ಚೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಪುಟ್ಟಬುದ್ಧಿ ಎಚ್ಚರಿಕೆ ನೀಡಿದರು.