ಮೈಸೂರು: 2026-27ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ಚುನಾವಣೆಯಲ್ಲಿ ಪಿ. ಮರಹಳ್ಳಿ ಮಹೇಶ್ ಕುಮಾರ್ ಅವರು ತಮ್ಮ ಎದುರಾಳಿ ಮಲ್ಲೇಶ್ ವಿರುದ್ಧ 224 ಮತಗಳ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಳಿಕ ಮಾತನಾಡಿದ ಮಹೇಶ್ ಕುಮಾರ್, ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘವನ್ನು ಮತ್ತಷ್ಟು ಬಲಿಷ್ಠ ಹಾಗೂ ಕ್ರಿಯಾಶೀಲ ಸಂಘಟನೆಯನ್ನಾಗಿ ರೂಪಿಸುವುದು ತಮ್ಮ ಪ್ರಮುಖ ಉದ್ದೇಶವಾಗಿದೆ. ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹಕ್ಕು ಹಾಗೂ ಸೌಲಭ್ಯಗಳಿಗಾಗಿ ಸಂಘದ ಮೂಲಕ ಪರಿಣಾಮಕಾರಿಯಾಗಿ ಧ್ವನಿ ಎತ್ತಲಾಗುವುದು ಎಂದು ಹೇಳಿದರು.
ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್, ವಿದ್ಯಾರ್ಥಿವೇತನ, ಸಂಶೋಧನಾ ಸೌಲಭ್ಯಗಳು, ಮಾರ್ಗದರ್ಶಕರ ಲಭ್ಯತೆ, ಗ್ರಂಥಾಲಯ ಹಾಗೂ ಪ್ರಯೋಗಾಲಯ ಸೌಲಭ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಸಂಶೋಧಕರಿಗೆ ವಿಶ್ವವಿದ್ಯಾನಿಲಯದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಬೇಕು ಎಂಬುದು ಸಂಘದ ಆಶಯವಾಗಿದೆ ಎಂದು ತಿಳಿಸಿದರು.
ಸಂಘದ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಸಂಶೋಧಕರ ಸಹಕಾರವೂ ಅಗತ್ಯ. ಚುನಾವಣೆಯಲ್ಲಿ ತಮ್ಮ ಮೇಲೆ ವಿಶ್ವಾಸವಿಟ್ಟು ಮತ ನೀಡಿದ ಎಲ್ಲ ಸಂಶೋಧಕರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಗೆಲುವು ತಮ್ಮೊಬ್ಬರದ್ದಲ್ಲ, ಇಡೀ ಸಂಶೋಧಕರ ಸಮುದಾಯದ ಗೆಲುವಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಮುನ್ನಡೆಸುವುದಾಗಿ ಹೇಳಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಿ. ಮರಹಳ್ಳಿ ಮಹೇಶ್ ಕುಮಾರ್ ಅವರನ್ನು ಯುವ ಮುಖಂಡ ಎಸ್. ಪುಟ್ಟಸ್ವಾಮಿ ಚುಂಚನಹಳ್ಳಿ, ಸಂಶೋಧಕರಾದ ಸುಭಾಷ್ ಹನೂರು, ಸುಪ್ರೀತ್ ಕೋಟೆ, ಮಹೇಶ್ ಚಿಂಟು, ವಜ್ರ, ಪ್ರಜ್ವಲ್, ಅಶ್ವಥ್ ಹಾಗೂ ಶರತ್ ಅವರು ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಅಭಿನಂದಿಸಿದರು.

