ಉಡುಪಿ: ಬಾಳೆಕುದ್ರು ಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ವಿರುದ್ಧ ಮಠದ ಭಕ್ತರು ಹಾಗೂ ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸಿ, ಪೀಠತ್ಯಾಗ ಮಾಡುವಂತೆ ಒತ್ತಾಯಿಸಿ ಮಠದ ಬಳಿ ಪ್ರತಿಭಟನೆ ನಡೆಸಿದರು.

ಮಠದ ಸಿಬ್ಬಂದಿಯೊಂದಿಗೆ ಸ್ವಾಮೀಜಿ ನಡೆಸಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಭಕ್ತರು ಆಕ್ರೋಶಗೊಂಡಿದ್ದಾರೆ. ಆಡಿಯೋದಲ್ಲಿ ಶೃಂಗೇರಿ ಜಗದ್ಗುರುಗಳ ಕುರಿತು ಅವಹೇಳನಕಾರಿ ಮಾತುಗಳಿವೆ ಹಾಗೂ ಸನ್ಯಾಸ ದೀಕ್ಷೆ ನೀಡಿದ ಹರಿಹರಪುರ ಶ್ರೀಗಳ ವಿರುದ್ಧವೂ ಅವಾಚ್ಯವಾಗಿ ಮಾತನಾಡಲಾಗಿದೆ ಎಂದು ಭಕ್ತರು ಆರೋಪಿಸಿದ್ದಾರೆ.

ಮಠದ ಅಮೂಲ್ಯ ಆಭರಣಗಳು, ರುದ್ರಾಕ್ಷಿ ಮತ್ತಿತರ ವಸ್ತುಗಳ ಪರಭಾರೆ ಹಾಗೂ ಹಣ ಹಂಚಿಕೆ ಕುರಿತು ಆಡಿಯೋದಲ್ಲಿ ಪ್ರಸ್ತಾಪಿಸಲಾಗಿದೆ. ಬಾಳೆಕುದ್ರು ಮಠದ ಮೂಲ ಪರಂಪರೆ ಮತ್ತು ಮಠದೊಳಗಿನ ದೈವ-ದೇವರುಗಳ ಸ್ಥಾಪನೆ ವಿಚಾರದಲ್ಲಿಯೂ ಆಡಿಯೋದಲ್ಲಿ ಆಕ್ಷೇಪಾರ್ಹ ಹೇಳಿಕೆಗಳಿವೆ ಎಂದು ಭಕ್ತರು ಆರೋಪಿಸಿದ್ದಾರೆ.

ಸ್ವಾಮೀಜಿಯವರ ಉತ್ತರಾಧಿಕಾರಿ ನೇಮಕದ ಬಗ್ಗೆಯೂ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಶಿಷ್ಯ ಸ್ವೀಕಾರಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇದ್ದ ಸಂದರ್ಭದಲ್ಲಿ ಉತ್ತರಾಧಿಕಾರಿ ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ. ಈ ಹಿಂದೆ ಸಂಧಾನಕ್ಕೆ ಬಂದ ಶಿಷ್ಯ ಸಮೂಹದ ವಿರುದ್ಧವೂ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಶಂಖ ಹಾಗೂ ಜಾಗಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದ ಭಕ್ತರು, ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿರುವುದು ಸಾಕಾಗುವುದಿಲ್ಲ. ಪೀಠತ್ಯಾಗ ಮಾಡಬೇಕು ಎಂದು ಒತ್ತಾಯಿಸಿದರು.