ಮೈಸೂರು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಆಕ್ಷೇಪಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸುದೀರ್ಘ ಪತ್ರದ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಅರಮನೆಯ ಧಾರ್ಮಿಕ ಕಾರ್ಯಗಳಿಗೆ ಪೊಲೀಸ್ ಇಲಾಖೆ ಯಾವುದೇ ಅಡ್ಡಿಪಡಿಸಿಲ್ಲ. ಭದ್ರತೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು, ವಿದೇಶಿ ರಾಯಭಾರಿಗಳು ಹಾಗೂ ನ್ಯಾಯಾಧೀಶರು ಸೇರಿದಂತೆ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಕಾಲ್ತುಳಿತ ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಧಾರ್ಮಿಕ ಚಟುವಟಿಕೆಗಳು ಸುಗಮವಾಗಿ ನಡೆಯಲು ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮಗಳ ಸಿದ್ಧತೆ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಸಮನ್ವಯ ಸಭೆಗಳನ್ನು ನಡೆಸಲಾಗಿತ್ತು. ಅರಮನೆ ಆಡಳಿತ ಮಂಡಳಿಯೊಂದಿಗೂ ಸಭೆ ನಡೆಸಿ ಅಗತ್ಯ ವ್ಯವಸ್ಥೆಗಳ ಕುರಿತು ಚರ್ಚಿಸಲಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಟ್ಟಿ ಕಾಳಗದಲ್ಲಿ ಪೊಲೀಸರ ತಪ್ಪಿಲ್ಲ

ಜಟ್ಟಿ ಕಾಳಗದ ವಿಚಾರದಲ್ಲಿ ಪೊಲೀಸ್ ಇಲಾಖೆಯ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿರುವ ಆಯುಕ್ತರು, ಮೂರು ತಂಡಗಳು ನಿಗದಿತ ಸಮಯಕ್ಕೆ ಆಗಮಿಸಿದ್ದವು. ನಾಲ್ಕನೇ ತಂಡ ತಡವಾಗಿ ಬಂದಿತ್ತು. ಅಲ್ಲದೆ, ಅಧಿಕೃತ ಪಾಸ್ ಇಲ್ಲದವರನ್ನೂ ಕರೆದುಕೊಂಡು ಬರಲಾಗಿತ್ತು ಎಂದು ತಿಳಿಸಿದ್ದಾರೆ.

ಅಂಬಾರಿ ಕಟ್ಟುವ ಸ್ಥಳದಲ್ಲಿ ಭದ್ರತಾ ಕ್ರಮ

ಅಂಬಾರಿ ಕಟ್ಟುವ ಸ್ಥಳದಲ್ಲಿ ಯಾವುದೇ ಅನಧಿಕೃತ ವ್ಯಕ್ತಿಗಳು ಇರಲಿಲ್ಲ. ಅಧಿಕಾರಿಗಳ ಕುಟುಂಬಸ್ಥರಿಗೂ ಪ್ರವೇಶಾವಕಾಶ ಕಲ್ಪಿಸಿರಲಿಲ್ಲ. ಹೊಸ ಆನೆ ನಿಯೋಜನೆಯಾಗಿದ್ದ ಹಿನ್ನೆಲೆಯಲ್ಲಿ ಅಧಿಕೃತ ಪಾಸ್ ಹೊಂದಿದ್ದವರಿಗೆ ಮಾತ್ರ ಅವಕಾಶ ನೀಡಲಾಗಿತ್ತು ಎಂದು ವಿವರಿಸಿದ್ದಾರೆ.

ಅಂಬಾರಿಯನ್ನು ಸ್ವೀಕರಿಸುವಾಗ ಹಾಗೂ ವಾಪಸ್ ನೀಡುವಾಗ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅರಮನೆ ಪ್ರತಿನಿಧಿಗಳು ಉಪಸ್ಥಿತರಿರಲು ಅವಕಾಶ ನೀಡಲಾಗಿತ್ತು. ಅಧಿಕೃತ ಪಾಸ್ ಹೊಂದಿದ್ದವರಿಗೆ ಅಂಬಾರಿ ಕಟ್ಟುವ ಹಾಗೂ ವಾಪಸ್ ನೀಡುವ ಸಂದರ್ಭದಲ್ಲಿ ಮುಕ್ತ ಪ್ರವೇಶ ಕಲ್ಪಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ ಕುಟುಂಬದ ಪಾರ್ಕಿಂಗ್ ವ್ಯವಸ್ಥೆಗೂ ಭದ್ರತೆ

ರಾಜ ಕುಟುಂಬದ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಲ್ಲಿಯೂ ಭದ್ರತೆಗೆ ಆದ್ಯತೆ ನೀಡಲಾಗಿತ್ತು. ಬ್ರಹ್ಮಪುರಿ ಗೇಟ್ ಬಳಿ ಪ್ರವೇಶಾವಕಾಶ ಕಲ್ಪಿಸಲಾಗಿತ್ತು ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಮೋದಾದೇವಿ ಒಡೆಯರ್ ಅವರ ಆಕ್ಷೇಪಗಳಿಗೆ ಪೊಲೀಸ್ ಆಯುಕ್ತರು ನೀಡಿರುವ ಈ ಪ್ರತ್ಯುತ್ತರ ಇದೀಗ ಮೈಸೂರು ದಸರಾ ಭದ್ರತಾ ವ್ಯವಸ್ಥೆ ಹಾಗೂ ಅರಮನೆ ಆಡಳಿತ ಮತ್ತು ಪೊಲೀಸ್ ಇಲಾಖೆಯ ನಡುವಿನ ಸಮನ್ವಯದ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ.