ಮೈಸೂರು: ದಸರಾ ಅಂಬಾರಿ ಆನೆ ಆಯ್ಕೆ ವಿಚಾರದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಮಾಹಿತಿ ನೀಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಡಿಸಿಎಫ್ ಪ್ರಭುಗೌಡ ಜಿಲ್ಲಾಧಿಕಾರಿಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ.
ಅಂಬಾರಿ ಆನೆ ಆಯ್ಕೆ ಕುರಿತು ರಾಜಮನೆತನಕ್ಕೆ ಲಿಖಿತವಾಗಿ, ಔಪಚಾರಿಕವಾಗಿ ಅಥವಾ ಅಧಿಕೃತವಾಗಿ ಮಾಹಿತಿ ನೀಡುವ ಪದ್ಧತಿ ಅರಣ್ಯ ಇಲಾಖೆಯಲ್ಲಿ ಇಲ್ಲ. ಆದರೂ ಸಮನ್ವಯದ ದೃಷ್ಟಿಯಿಂದ ಅಕ್ಟೋಬರ್ 11 ಮತ್ತು 12ರಂದು ದೂರವಾಣಿ ಮೂಲಕ ಅಗತ್ಯ ಮಾಹಿತಿಯನ್ನು ನೀಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 12ರಂದು ಸಂಜೆ 5.44ಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ದೂರವಾಣಿ ಮೂಲಕ ಅಂಬಾರಿ ಆನೆ ಆಯ್ಕೆ ವಿಚಾರವಾಗಿ ವಿವರಿಸಲಾಗಿದೆ. ಅಕ್ಟೋಬರ್ 13ರಂದು ಪತ್ರಿಕಾ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೂ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಹೇಂದ್ರ ಆನೆ ಆಯ್ಕೆ ಮಾಡದಿರಲು ಕಾರಣವೇನು?
ಅಂಬಾರಿ ಹೊರುವ ಆನೆಯ ಆಯ್ಕೆ ಪ್ರಕ್ರಿಯೆಯಲ್ಲಿ ಮಹೇಂದ್ರ ಆನೆಯನ್ನು ಆಯ್ಕೆ ಮಾಡದಿರಲು ಕಾರಣವೇನು ಎಂಬುದರ ಬಗ್ಗೆಯೂ ಡಿಸಿಎಫ್ ವಿವರಣೆ ನೀಡಿದ್ದಾರೆ. ಈ ಬಾರಿ ಪ್ರಶಾಂತ ಆನೆಯನ್ನು ಆಯ್ಕೆ ಮಾಡಲು ಪರಿಗಣಿಸಿದ ಮಾನದಂಡಗಳು ಹಾಗೂ ಆಯ್ಕೆ ಪ್ರಕ್ರಿಯೆಯ ಕುರಿತು ಸುದೀರ್ಘವಾಗಿ ಪತ್ರದಲ್ಲಿ ವಿವರಿಸಿದ್ದಾರೆ.
ಅಂಬಾರಿ ಆನೆ ಆಯ್ಕೆ ವಿಚಾರದಲ್ಲಿ ಇಲಾಖೆಯು ಮಾಹಿತಿ ನೀಡಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪ್ರಭುಗೌಡ, ರಾಜಮನೆತನದೊಂದಿಗೆ ಸಮನ್ವಯ ಸಾಧಿಸುವ ಉದ್ದೇಶದಿಂದ ದೂರವಾಣಿ ಮೂಲಕ ಮಾಹಿತಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಮೋದಾದೇವಿ ಒಡೆಯರ್ ಅವರ ಆರೋಪದ ಬೆನ್ನಲ್ಲೇ ಡಿಸಿಎಫ್ ಪ್ರಭುಗೌಡ ಜಿಲ್ಲಾಧಿಕಾರಿಗೆ ಪತ್ರ ಬರೆದು ನೀಡಿರುವ ಈ ಸ್ಪಷ್ಟನೆ ದಸರಾ ಅಂಬಾರಿ ಆನೆ ಆಯ್ಕೆ ವಿಚಾರದ ಚರ್ಚೆಗೆ ಮತ್ತಷ್ಟು ಮಹತ್ವ ನೀಡಿದೆ.

