ನಂಜನಗೂಡು: ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಮದಲ್ಲಿ ಮೈಸೂರು ಮಹಾರಾಜ ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಸಂಜೆ ಕಾಲೇಜು ವತಿಯಿಂದ ಏಳು ದಿನಗಳ ಕಾಲ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಬೊಕ್ಕಹಳ್ಳಿ ಮತ್ತು ಬೊಕ್ಕಹಳ್ಳಿ ಹೊಸೂರು ಗ್ರಾಮಸ್ಥರಿಗೆ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿಯಿಂದ ನೀಡುವ ಹಸಿ ಕಸ ಮತ್ತು ಒಣ ಕಸ ಹಾಕುವ ಬಕೆಟ್ ಗಳನ್ನು ವಿತರಿಸಿದರು.
ಮನೆ ಮನೆಗಳಿಗೆ ತೆರಳಿದ ವಿದ್ಯಾರ್ಥಿಗಳು ಗ್ರಾಮದ ಮಹಿಳೆಯರಿಗೆ ಬಕೆಟ್ ಗಳನ್ನು ನೀಡಿ, ಸ್ವಚ್ಚತೆ ಕಾಪಾಡಬೇಕು ಎಂದು ಅರಿವು ಮೂಡಿಸಿದರು. ಸ್ವಚ್ಛತೆ ಕಾಪಾಡಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ. ಕೊಟ್ಟ ಬಕೆಟ್‌ನಲ್ಲಿ ಒಣಕಸ, ಹಸಿ ಕಸವನ್ನು ಬೇರ್ಪಡಿಸಿ ಹಾಕಬೇಕು. ಇದರಿಂದ ಆರೋಗ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಕುಂಡಿ ಮಹದೇವಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಲ್ಕುಂಡಿ ಮಹದೇವಸ್ವಾಮಿ, ಮಹಾರಾಜ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ. ಮಧುಸೂದನ್, ಡಾ.ಕೃಷ್ಣಪ್ಪ, ವಿವಿ ಸಂಜೆ ಕಾಲೇಜಿನ ಶಿಬಿರಾಧಿಕಾರಿ ಡಾ.ನಿಂಗರಾಜು, ಡಾ. ಶಿವಶಂಕರ್ ಸೇರಿದಂತೆ ಶಿಬಿರಾರ್ಥಿಗಳು ಭಾಗವಹಿಸಿದ್ದರು.

